ವಾರಾಹಿಯಿಂದ 45 ಎಂ ಎಲ್ ಡಿ ನೀರು ಸರಬರಾಜು: ಪೌರಾಯಕ್ತ ಮಹಂತೇಶ್

ಸಂವಾದ ಕಾರ್ಯಕ್ರಮದಲ್ಲಿ  ಪೌರಾಯುಕ್ತ ಮಹಂತೇಶ್​ ಹಂಗರಗಿ ಮಾತನಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಪೌರಾಯುಕ್ತ ಮಹಂತೇಶ್​ ಹಂಗರಗಿ ಮಾತನಾಡಿದರು.
Published on
ಉಡುಪಿ: ನಗರಕ್ಕೆ ಪ್ರತಿದಿನ 33 ಎಂಎಲ್​ಡಿ ನೀರು ಅಗತ್ಯವಾಗಿದ್ದು, ಬಜೆ ಡ್ಯಾಂನಲ್ಲಿ ಪ್ರಸ್ತುತ 2.4 ಮೀಟರ್​ ನೀರು ಸಂಗ್ರಹವಿದೆ. ಜ. 9ರಿಂದ ಜೂ.30ರವರೆಗೆ ಪ್ರತಿ ದಿನ 45 ಎಂಎಲ್​ಡಿ ವಾರಾಹಿ ನೀರು ಸರಬರಾಜಾಗುತ್ತಿದ್ದು, ಇದನ್ನು ಜುಲೈ 30ರವರೆಗೆ ವಿಸ್ತರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೌರಾಯುಕ್ತ ಮಹಂತೇಶ್​ ಹಂಗರಗಿ ತಿಳಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಆಯೋಜಿಸಲಾದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾರಾಹಿ ಕ್ಯಾನಲ್​ನಿಂದ ಹಾಲಾಡಿ ಟಕದಲ್ಲಿ ಶುದ್ಧೀಕರಿಸಿದ ನೀರು ತರಲಾಗುತ್ತಿದ್ದು, ಪೈಪ್​ಲೈನ್​ ಮಾರ್ಗದಲ್ಲಿರುವ ಸುಮಾರು 53 ಗ್ರಾಮಗಳಿಗೆ 10 ಎಂಎಲ್​ಡಿ ನೀರು ಒದಗಿಸಲಾಗಿದೆ. ಬಜೆಯಿಂದ ಪ್ರತಿದಿನ 10 ಎಂಎಲ್​ಡಿ ನೀರು ಪಂಪಿಂಗ್​ ಮಾಡಲಾಗುತ್ತಿದೆ. ಡಿಸೆಂಬರ್​ ವರೆಗೆ ಸ್ವರ್ಣ ನದಿಯಿಂದ ನೀರು ಸರಬರಾಜಾಗಲಿದೆ ಎಂದರು.
ಮಳೆಗಾಲದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು 40 ಜನರ ತಂಡ ಸಿದ್ಧಪಡಿಸಲಾಗಿದೆ. ಅಪಾಯಕಾರಿ ಮರ ತೆರವು ಮಾಡಲಾಗುತ್ತಿದೆ. ತೋಡು ಮತ್ತು ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ ಶೇ. 70ರಷ್ಟು ಮುಗಿದಿದೆ. ಮಳೆ ನಿಂತು ಹೋದ ಮೇಲೆ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ರಾಸಾಯನಿಕ ಸಿಂಪಡಣೆಗೆ ಾಗಿಂಗ್​ ಯಂತ್ರ ಖರೀದಿಸಲಾಗಿದೆ ಎಂದರು.
ನೆಲ್ಲಿಕಟ್ಟೆಯಲ್ಲಿ ಪೇ ಪಾರ್ಕಿಂಗ್​
ನಗರದ ನೆಲ್ಲಿಕಟ್ಟೆಯಲ್ಲಿ ವಿಶ್ವೇಶ್ವರಯ್ಯ ಮಾರುಕಟ್ಟೆ ನೆಲಸಮಗೊಳಿಸಲಾಗಿದ್ದು, ಪಿಪಿಪಿ ಮಾದರಿಯಲ್ಲಿ ಪೇ ಪಾರ್ಕಿಂಗ್​ ಸಹಿತ ವಾಣಿಜ್ಯ ಕಟ್ಟದ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಸದ್ಯ ಕಟ್ಟಡ ನಿರ್ಮಾಣವಾಗುವವರೆಗೆ ಖಾಲಿ ಜಾಗದಲ್ಲಿ ಪೇ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲು ಟೆಂಡರ್​ ಕರೆಯಲಾಗಿದೆ. ದೈನಂದಿನ ತರಕಾರಿ ಮಾರುಕಟ್ಟೆಯನ್ನು ಬನ್ನಂಜೆ&ಬ್ರಹ್ಮಗಿರಿ ರಸ್ತೆಗೆ ಸ್ಥಳಾಂತರಿಸಲಾಗುವುದು ಎಂದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್​, ಸಂಘದ ಕೋಶಾಧಿಕಾರಿ ಹರೀಶ್​ ಕುಂದರ್​ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net