ತೆಂಗು ಬೆಳೆಗಳಲ್ಲಿ ಕಪ್ಪುತಲೆ ಹುಳ ನಿಯಂತ್ರಣಕ್ಕೆ ಕ್ರಮ

samvada
ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್​ ಮಾತನಾಡಿದರು.
Published on: 

ಉಡುಪಿ: ತೋಟಗಾರಿಕಾ ಬೆಳೆಗಳ ಮೇಲೆ ಎಲ್​ನಿನೋ ಪ್ರಭಾವ ಹೆಚ್ಚಾಗಿದ್ದು, ಮುಂಗಾರು ಮಳೆ ಶೇ. 27ರಷ್ಟು ಕೊರತೆಯಾಗಿದೆ. ಇದರಿಂದ ಕೀಟ ರೋಗ ಹಾವಳಿಯೂ ಹೆಚ್ಚಿದೆ. ಬೈಂದೂರು ಭಾಗದಲ್ಲಿ ತೆಂಗು ಬೆಳೆಗಳಲ್ಲಿ ಕಪ್ಪುತಲೆ ಹುಳ ಪತ್ತೆಯಾಗಿದ್ದು, ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್​ ತಿಳಿಸಿದರು.

ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನ ಸಮಿತಿ ಸಹಯೋಗದಲ್ಲಿ ನಡೆದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರಲ್ಲಿ ತಿಳುವಳಿಕೆ ಮೂಡಿಸದಿದ್ದರೆ ಪರಿಣಾಮ ತೀವ್ರವಾಗಲಿದೆ. ಅಡಕೆ ಬೇಗ ಹಣ್ಣಾಗುತ್ತಿದೆ, ಉದುರುತ್ತಿದೆ, ಗಾತ್ರ ಸಣ್ಣದಾಗಿದೆ. ಮಳೆ ಕಡಿಮೆಯಾಗಿದ್ದರಿಂದ ಅಂತರ್ಜಲ ಮರುಪೂರಣ ಕಡಿಮೆಯಾಗಿದೆ. ಆವಿ ಹೆಚ್ಚಾಗುತ್ತಿದೆ. ಹೀಗಾಗಿ ನೀರಿನ ಮಿತ ವ್ಯಯ ಅತಿ ಮುಖ್ಯ ಎಂದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಭೂಮಿಕಾ ಎಚ್​. ಆರ್​. ಮಾತನಾಡಿ, ಎಲ್​ನಿನೋ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ. ಹೀಗಾಗಿ ಕಡಿಮೆ ನೀರು ಅವಶ್ಯಕತೆ ಇರುವ ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಕೆ ಉತ್ತಮ. ವಾತಾವರಣದಲ್ಲಾದ ಬದಲಾವಣೆ, ಬಿಸಿಯಿಂದ ರಸ ಹೀರುವ ಕೀಟಗಳ ಹಾವಳಿ ವೃದ್ಧಿಯಾಗಿದೆ ಎಂದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರದ ತಾಂತ್ರಿಕ ಅಧಿಕಾರಿ ಕೆ. ಎಂ. ಪ್ರವಿಣ್​ ಹಾಗೂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ್​ ಕುಮಾರ್​ ಎಲ್​. ಮಾತನಾಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್​ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್​, ಉಡುಪಿ ಪತ್ರಿಕಾ ಭವನ ಸಮಿತಿ ಸಹ ಸಂಚಾಲಕ ಗಣೇಶ್​ ಕಲ್ಯಾಣಪುರ, ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧೀಶ್​ ಹೊಳ್ಳ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ಪುಂಡಲೀಕ ಮರಾಠೆ ಕಾರ್ಯಕ್ರಮ ನಿರೂಪಿಸಿದರು.