ಕುಕ್ಕೆಯಲ್ಲಿ ನಮ್ಮ ನಡಿಗೆ ತ್ಯಾಜ್ಯಮುಕ್ತ ಕಡೆಗೆ ಬೃಹತ್ ಸ್ವಚ್ಛತಾ ಅಭಿಯಾನ ಶನಿವಾರ ನಡೆಯಿತು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ., ಪ್ರಮುಖರಾದ ಗಿರಿಧರ ಸ್ಕಂಧ, ಪ್ರಶಾಂತ್ ಮೊದಲಾದವರಿದ್ದರು.
ಸುಬ್ರಹ್ಮಣ್ಯ: ಪ್ರಕೃತಿ ನಮಗೆ ಸ್ವಚ್ಛಂದವಾದ ಗಾಳಿ, ಶುದ್ಧ ಕುಡಿಯುವ ನೀರು ಹಾಗೂ ಫಲವತ್ತಾದ ಭೂಮಿ ನೀಡಿದೆ. ಇದನ್ನು ಉಳಿಸಿ ಪೋಷಿಸುವ ಕೆಲಸ ನಮ್ಮದಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ತಮ್ಮ ಮನೆ ಪರಿಸರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರುವುದು ಹಾಗೂ ಎಲ್ಲಿಂದರಲ್ಲಿ ಕಸ ಎಸೆಯುವವರಿಗೆ ಜಾಗೃತಿ ಮೂಡಿಸುವಂಥ ಕೆಲಸ ಮಾಡಬೇಕಾಗಿದೆ ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶ್ರೀಕಾಂತ್ ಹೇಳಿದರು.
ಸುಬ್ರಹ್ಮಣ್ಯ ಗ್ರಾಪಂ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಮ್ಮ ನಡಿಗೆ ತ್ಯಾಜ್ಯಮುಕ್ತ ಕಡೆಗೆ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ., ಪ್ರಮುಖರಾದ ಗಿರಿಧರ ಸ್ಕಂಧ, ಪ್ರಶಾಂತ್ ಕೋಡಿಬೈಲು, ರವಿ ಕಕ್ಕೆಪದವು, ಸುಬ್ರಹ್ಮಣ್ಯ ಗೌಡ, ರಾಧಾಕೃಷ್ಣ ಚಿದ್ಗಲ್, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಗ್ರಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು.
700ಕ್ಕೂ ಹೆಚ್ಚು ಮಂದಿ ಭಾಗಿ
ಸುಬ್ರಹ್ಮಣ್ಯ ಗ್ರಾಪಂ ವ್ಯಾಪ್ತಿಗೊಳಪಟ್ಟ ಕುಲ್ಕುಂದದ ವೆಂಕಟಪುರದಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದವರೆಗಿನ ರಾಜ್ಯ ಹೆದ್ದಾರಿ ಮತ್ತು ಕುಕ್ಕೆ ಮುಖ್ಯರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಮಠ, ಸರ್ಕಾರಿ ಇಲಾಖೆಗಳು, ಶಾಲೆ, ಕಾಲೇಜುಗಳು, ಸಂಘ ಸಂಸ್ಥೆಗಳ 700ಕ್ಕೂ ಅಧಿಕ ಮಂದಿ ಅಭಿಯಾನದಲ್ಲಿ ಭಾಗವಹಿಸಿದ್ದರು.