

ಉಡುಪಿ: ಸಂಪತ್ತಿನ ಅಧಿದೇವತೆಯಾದ ಹಾಗೂ ಅಷ್ಟ ಐಶ್ವರ್ಯಗಳನ್ನು ದಯಪಾಲಿಸುವ ಲಕ್ಷ್ಮೀ ದೇವಿ ಆರಾಧನೆಯ ದೀಪಾವಳಿ ಹಬ್ಬದ ಆಚರಣೆಗೆ ಉಡುಪಿ ಜಿಲ್ಲೆಯ ಆಸ್ತಿಕರು ಸಿದ್ಧತೆ ಮಾಡಿಕೊಂಡಿದ್ದಾರೆ.
ನಗರದಲ್ಲಿರುವ ಅಂಗಡಿ ಮಾಲೀಕರು ಸುಣ್ಣಬಣ್ಣ ಬಳಿದಿದ್ದು, ತಳಿರು-ತೋರಣ, ಬಾಳೆಗಿಡ, ಕಬ್ಬು, ಹೂವುಗಳನ್ನು ಅಲಂಕಾರಕ್ಕಾಗಿ ಖರೀದಿಸಿದ್ದಾರೆ. ವ್ಯಾಪಾರದ ಉನ್ನತಿಗಾಗಿ ಲಕ್ಷ್ಮೀ ದೇವಿಯ ಪೂಜೆಗೆ ಸಜ್ಜಾಗಿದ್ದಾರೆ. ಜಿಲ್ಲೆಯ ದೇವಿ ಮಂದಿರಗಳಲ್ಲೂ ವಿಶೇಷ ಆರಾಧನೆ ನಡೆಯಲಿದೆ.
ಮನೆಗಳಲ್ಲಿ ಸಡಗರ
ಬೆಳಕಿನ ಹಬ್ಬವೆಂದೇ ಆಚರಿಸಲ್ಪಡುವ ದೀಪಾವಳಿ ಹಬ್ಬಕ್ಕಾಗಿ ಮನೆಗಳಲ್ಲಿ ಬೆಳಗಲು ಹಣತೆ ಹಾಗೂ ಆಕಾಶದೀಪ ಖರೀದಿಸಿದ್ದಾರೆ. ಮನೆಯಂಗಳದಲ್ಲಿ ಸುಂದರ ರಂಗವಲ್ಲಿ ಹಾಕುವಲ್ಲಿ ಮಹಿಳೆಯರು ನಿರತರಾಗಿದ್ದಾರೆ. ಮನೆ ಮಂದಿಗೆಲ್ಲ ಹೊಸ ಬಟ್ಟೆ, ಪಟಾಕಿ ಖರೀದಿಸಿದ್ದು, ಸಂಭ್ರಮದಿಂದ ಹಬ್ಬ ಆಚರಿಸಲು ಎಲ್ಲ ಮನೆಗಳಲ್ಲೂ ಸಿದ್ಧತೆ ನಡೆದಿದೆ.
ಹಣ್ಣು-ತರಕಾರಿ ದರ ಯಥಾಸ್ಥಿತಿ
ಈ ಬಾರಿಯ ದೀಪಾವಳಿಗೆ ಹಣ್ಣು-ತರಕಾರಿ ಹಾಗೂ ಹೂವಿನ ದರಗಳ ಬೆಲೆ ಏರಿಕೆಯ ಬಿಸಿ ತಟ್ಟಿಲ್ಲ. ಈಗಾಗಲೇ ಇರುವ ದರವೇ ಹೆಚ್ಚಿದ್ದು, ಇನ್ನೂ ಬೆಲೆ ಏರಿಕೆ ಬಿಸಿ ಈ ಬಾರಿ ಇಲ್ಲದಿರುವುದು ವಿಶೇಷ. ಪ್ರತಿಬಾರಿಯೂ ಹಬ್ಬದ ಸಂದರ್ಭದಲ್ಲಿ ಏರಿಕೆಯಾಗುತ್ತಿದ್ದ ಶಂಕರಪುರ ಮಲ್ಲಿಗೆ ದರ ಶನಿವಾರ ಮಾರುಕಟ್ಟೆಯಲ್ಲಿ ಅಟ್ಟೆಗೆ 470 ರೂ., ಜಾಜಿ 200 ರೂ., ಸೇವಂತಿಗೆ ಮಾರಿಗೆ 150 ರೂ., ಗೊಂಡೆ ಮಾರಿಗೆ 80 ರೂ., ಗುಲಾಬಿ ಹೂ ಒಂದಕ್ಕೆ 15 ರೂ. ಇತ್ತು.
ಉಡುಪಿ ನಗರದ ಹಾಗೂ ಮಣಿಪಾಲದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಾವೇರಿ, ಬಾಗಲಕೋಟೆ, ಹರಿಹರ, ದಾವಣಗೆರೆ ಜಿಲ್ಲೆಯ ಹೂವಿನ ವ್ಯಾಪಾರಿಗಳು ಬಣ್ಣದ ಬಣ್ಣದ ಗೊಂಡೆ ಹೂ, ಸೇವಂತಿಗೆ ಮಾರಾಟದಲ್ಲಿ ನಿರತರಾಗಿದ್ದಾರೆ. ಮಾರಿಗೆ 100 ರೂ. ದರದಲ್ಲಿ ನೀಡುತ್ತಿದ್ದು, ಜನರು ಮುಗಿಬಿದ್ದು ಖರೀದಿಯಲ್ಲಿ ತೊಡಗಿರುವುದು ಕಂಡುಬಂತು.
ಬಟ್ಟೆ ಅಂಗಡಿ ಹಾಗೂ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರು ತುಂಬಿದ್ದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಹಬ್ಬದ ಸಾಂಪ್ರದಾಯಿಕ ವಿಧಿವಿಧಾನ ನ.6ರಿಂದಲೇ ಪ್ರಾರಂಭಗೊಂಡಿದೆ. ಶುಕ್ರವಾರ ಯಮದೀಪ ಆಚರಿಸಲಾಗಿದ್ದು, ನ.7ರಂದು ಸಂಜೆ ನೀರು ತುಂಬುವ ಹಬ್ಬ (ಹಿರಿಯರ ಹಬ್ಬ) ನೆರವೇರಿತು. ಇಂದು (ನ.8) ನರಕ ಚತುರ್ದಶಿ ನಿಮಿತ್ತ ಬೆಳಗ್ಗೆ 5:25ಕ್ಕೆ ಚಂದ್ರೋದಯ ಕಾಲದಲ್ಲಿ ಎಣ್ಣೆ ಹಚ್ಚಿ ಅಭ್ಯಂಗ ಸ್ನಾನ ನಡೆಯಲಿದೆ. ಸಂಜೆ ಧನಲಕ್ಷ್ಮೀ ಪೂಜೆ, ಕನಕ ಗೋಪುರದ ಬಳಿ ರಾತ್ರಿ ಬಲೀಂದ್ರ ಪೂಜೆ ನೆರವೇರಲಿದೆ. ನ.9ರಂದು ಬೆಳಗ್ಗೆ 8 ಗಂಟೆಗೆ ಶ್ರೀಮಠದ ಗೋವುಗಳಿಗೆ ಪೂಜೆ ಹಾಗೂ ತದನಂತರ ರಥಬೀದಿಯಲ್ಲಿ ಗೋವುಗಳ ಮೆರವಣಿಗೆ ನಡೆಯಲಿದೆ. ನ.10ರಂದು ಸಂಜೆ ತುಳಿಸಿ ಪೂಜೆ ಪ್ರಾರಂಭಗೊಳ್ಳಲಿದೆ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ತಿಳಿಸಿದ್ದಾರೆ.