

ಉಡುಪಿ: ಉಡುಪಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಪೆರ್ಡೂರು ಮೂಲದ ನಿವಾಸಿ ಪ್ರದೀಪ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಓರ್ವ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಖುಷಿನಗರ ಜಿಲ್ಲೆಯ ಪತ್ರಾವನದ ಸುಖ್ಪುರ ಬಂಗಾಲಿ ಪಟ್ಟಿಯ ನಿವಾಸಿ ಪವನಕುಮಾರ (24), ಕಾನೂನು ಸಂಘರ್ಷಕ್ಕೆ ಒಳಗಾದ ಯುವಕ, ಹೆಬ್ರಿ ತಾಲೂಕು ವರಂಗ ಗ್ರಾಮದ ಮುನಿಯಾಲು ಅಂಚೆ, ವೀರ ಸಾವರ್ಕರ್ ನಗರದ ಗಾಂಧಿ ಮೈದಾನ ಸಮೀಪದ ನಿವಾಸಿ ಆದರ್ಶ ಕಾಂಚನ್ (30), ವರಂಗ ಗ್ರಾಮದ ಮುನಿಯಾಲು ನಿವಾಸಿ ದಿನೇಶ ಶೆಟ್ಟಿ (32) ಬಂಧಿತರು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ ನೇತೃತ್ವದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕರ ತಂಡ ರಚಿಸಲಾಗಿತ್ತು. ಈ ತಂಡವು ನ.3ರಂದು ಮಧ್ಯಪ್ರದೇಶಕ್ಕೆ ತೆರಳಿ ಭೋಪಾಲ ರೈಲ್ವೆ ನಿಲ್ದಾಣದ ಬಳಿ ಇದ್ದ ಪವನಕುಮಾರ ಹಾಗೂ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದರು. ನ.5ರಂದು ಪವನಕುಮಾರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಸುರಕ್ಷತೆಯ ದೃಷ್ಟಿಯಿಂದ ಪರಿವೀಕ್ಷಣಾಲಯದಲ್ಲಿ ಇಡಲಾಗಿದೆ.
ಉಳಿದ ಆರೋಪಿಗಳಾದ ಆದರ್ಶ ಹಾಗೂ ದಿನೇಶ ಅವರನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಉಪನಿರೀಕ್ಷಕಿ ಮುಕ್ತಾಬಾಯಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನ. 7ರ ರಾತ್ರಿ ಕಾರ್ಕಳದಲ್ಲಿ ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖಾಧಿಕಾರಿಯಾದ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶಪ್ರಸಾದ ಅವರ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಹರಿರಾಮ ಶಂಕರ ತಿಳಿಸಿದ್ದಾರೆ.