ರಸ್ತೆಗಳಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ!

ದೂಪದಕಟ್ಟೆ-ಅತ್ತೂರು ಚರ್ಚ್ ರಸ್ತೆ ಅಧೋಗತಿ
ಹೊಂಡ ಗುಂಡಿಗಳಿಂದ ಕೂಡಿದ ದೂಪದಕಟ್ಟೆ-ಅತ್ತೂರು ಸಂಪರ್ಕ ರಸ್ತೆ.
ಹೊಂಡ ಗುಂಡಿಗಳಿಂದ ಕೂಡಿದ ದೂಪದಕಟ್ಟೆ-ಅತ್ತೂರು ಸಂಪರ್ಕ ರಸ್ತೆ.
Published on: 

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಬೃಹತ್ ಹೊಂಡಗಳು, ಮಳೆಯಾದರೆ ಕೆರೆಯಂತಾಗುವ ರಸ್ತೆ. ಹೊಂಡದಲ್ಲಿ ನಿಂತ ಕೆಸರು ನೀರಿನಿಂದ ಪಾದಚಾರಿಗಳಿಗೆ ನಿತ್ಯ ಕಿರಿಕಿರಿ. ಹೊಂಡ ತಪ್ಪಿಸುವ ಭರದಲ್ಲಿ ಅಪಘಾತಕ್ಕೆ ಸಿಲುಕಿಕೊಳ್ಳುವ ವಾಹನ ಸವಾರರು. ಈ ಪರಿಸ್ಥಿತಿ ನಿರ್ವಾಣವಾಗಿರುವುದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾಗೆ ಸಂಪರ್ಕ ಕಲ್ಪಿಸುವ ದೂಪದಕಟ್ಟೆ-ಅತ್ತೂರು ಮುಖ್ಯ ರಸ್ತೆಯಲ್ಲಿ.

ಸಾವಿರಾರು ಭಕ್ತರು, ಪ್ರವಾಸಿಗರು, ಮಕ್ಕಳು ಹಾಗೂ ಸ್ಥಳೀಯರು ಈ ರಸ್ತೆಯಲ್ಲಿ ನಿತ್ಯ ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ. ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ದೂಪದಕಟ್ಟೆಯಿಂದ ಸಂಪರ್ಕ ಪಡೆಯುವ ಅತ್ತೂರು ಸಂಪರ್ಕ ರಸ್ತೆ ಕಳೆದ ಹಲವು ತಿಂಗಳಿಂದ ಹದಗೆಟ್ಟಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದೂಪದಕಟ್ಟೆಯಿಂದ ಅತ್ತೂರು ಚರ್ಚ್‌ವರೆಗೆ ರಸ್ತೆಯ ಪ್ರತಿ 50 ಮೀಟರ್‌ಗೆ ಒಂದರಂತೆ ಅಳವಾದ ಹೊಂಡಗಳು ಬಿದ್ದಿದ್ದು, ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಆಟೋ ರಿಕ್ಷಾ ಹಾಗೂ ಬಾಡಿಗೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ.

ಯಾತ್ರಾರ್ಥಿಗಳಿಗೆ ತೊಂದರೆ

ಪ್ರತಿದಿನ ಅತ್ತೂರು ಚರ್ಚ್‌ಗೆ ಆಗಮಿಸುವ ನೂರಾರು ಯಾತ್ರಾರ್ಥಿಗಳಿಗೆ ದುರಸ್ತಿಯಾಗದ ರಸ್ತೆ ಕಹಿ ಅನುಭವ ನೀಡುತ್ತಿದೆ. ಜತೆಗೆ ಇಲ್ಲೇ ಸಮೀಪದ ಪರ್ಪಲೆ ಗಿರಿಗೆ ಬರುವ ಭಕ್ತರು ಹೊಂಡಗುಂಡಿಯಲ್ಲೇ ಓಡಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ವಾಣವಾಗಿದೆ. ಪಡುಬಿದ್ರಿ ಭಾಗದಿಂದ ಬಂದು ಶಿವಮೊಗ್ಗ, ಮಲೆನಾಡು ಸಂಪರ್ಕ ಸಾಧಿಸಲು ಇದು ಹತ್ತಿರದ ರಸ್ತೆಯಾಗಿರುವುದರಿಂದ ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಓಡಾಡುತ್ತವೆ. ಇದೀಗ ರಸ್ತೆ ತೀರ ಹದಗೆಟ್ಟ ಪರಿಣಾಮ ಸುತ್ತಿ ಬಳಸಿಕೊಂಡು ಸಾಗಬೇಕಾದ ಅನಿವಾರ್ಯತೆಯಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ದಿನನಿತ್ಯ ಈ ರಸ್ತೆಯಲ್ಲೇ ಸಂಚರಿಸಬೇಕು. ಆದರೆ ಪ್ರತಿಯೊಂದು ಗುಂಡಿಯೂ ಜೀವಕ್ಕೆ ಆಪತ್ತು ತರುವಂತಿದೆ. ಮಳೆಗಾಲದಲ್ಲಂತೂ ರಸ್ತೆ ಹೊಂಡಗಳಲ್ಲಿ ನೀರು ತುಂಬಿ ಕೆರೆಯಂತಾಗುತ್ತದೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ.
ಸುಕೇಶ್, ಸ್ಥಳೀಯ ನಿವಾಸಿ
ಇಲ್ಲಿನ ರಸ್ತೆ ಸಮಸ್ಯೆ ಇಂದು ನಿನ್ನೆಯದಲ್ಲ. ಬೃಹತ್ ಗಾತ್ರದ ಗುಂಡಿಯಲ್ಲಿ ವಾಹನವನ್ನು ಚಲಾಯಿಸಬೇಕಾಗಿದೆ. ವಾಹನಗಳು ಪದೇ ಪದೆ ರಿಪೇರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಜತೆಗೆ ಅಪಘಾತಕ್ಕೂ ಕಾರಣವಾಗುತ್ತಿದೆ. ಇಲ್ಲಿನ ರಸ್ತೆಯಲ್ಲಿ ಹೊಂಡ ತಪ್ಪಿಸಿ ಓಡಾಡುವುದೇ ದೊಡ್ದ ಸಾಹಸವಾಗಿದೆ.
ರಮೇಶ್, ರಿಕ್ಷಾ ಚಾಲಕ