

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರವಂತೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಿಂದ ನೇತಾಜಿ ಸುಭಾಶ್ಚಂದ್ರ ಬೋಸ್ ಹೈಸ್ಕೂಲಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹೊಂಡ ಗುಂಡಿಮಯವಾಗಿದ್ದು, ವಾಹನ ಸವಾರರು ಹಾಗೂ ಶಾಲಾ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ.
ಮರವಂತೆ ಗ್ರಾಮ ಪಂಚಾಯಿತಿ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಈ ರಸ್ತೆಯನ್ನು ನಿತ್ಯ ಅನೇಕ ಮಂದಿ ಆಶ್ರಯಿಸಿದ್ದಾರೆ. 2 ಕಿ.ಮೀ. ದೂರದ ರಸ್ತೆಯ ಅಲ್ಲಲ್ಲಿ ಹಲವೆಡೆ ಹೊಂಡಗಳು ಕಾಣಿಸಿಕೊಂಡಿವೆ. ಶೀಘ್ರ ಕಾಂಕ್ರೀಟ್ ಅಥವಾ ಮರು ಡಾಂಬರುಗೊಳಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ರಸ್ತೆ ಮೂಲಕ ನೂರಾರು ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾಗಿದ್ದು, ರಸ್ತೆ ದುಸ್ಥಿತಿ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಮಳೆ ಬರುವ ವೇಳೆ ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ಶಾಲೆಗೆ ಹೋಗುವ ಮಕ್ಕಳು ಹಾಗೂ ಪಾದಚಾರಿಗಳು ಸಂಕಷ್ಟಪಡುವಂತಾಗಿದೆ.
ಈ ರಸ್ತೆ ಅವ್ಯವಸ್ಥೆ ಬಗ್ಗೆ ಕೆಲ ದಿನಗಳ ಹಿಂದೆ ನಡೆದಿದ್ದ ಮಕ್ಕಳ ಗ್ರಾಮಸಭೆಯಲ್ಲೂ ಪ್ರಸ್ತಾಪವಾಗಿದ್ದು, ಭಾರಿ ಚರ್ಚೆಗೆ ಕಾರಣವಾಗಿತ್ತು. ರಸ್ತೆ ಅಭಿವೃದ್ಧಿಗೊಂಡು ದಶಕಗಳೇ ಕಳೆದಿದ್ದು, ಆ ಬಳಿಕ ಯಾರೂ ತಿರುಗಿ ನೋಡಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ರಸ್ತೆ ದುರಸ್ತಿಗೆ ಅನುದಾನ ಮಂಜೂರಾಗಿದೆ ಎಂದು ಹೇಳಲಾಗುತ್ತಿದ್ದರೂ, ಕಾಮಗಾರಿ ಆರಂಭ ಯಾವಾಗ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಜನಪ್ರತಿನಿಧಿಗಳು, ಸ್ಥಳೀಯಾಡಳಿತ ಈ ಬಗ್ಗೆ ಗಮನಹರಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಿದೆ.
ಭಾರಿ ಮಳೆ ಸಂದರ್ಭ ರಸ್ತೆ ಹೊಂಡದಲ್ಲಿ ನೀರು ಶೇಖರಣೆಗೊಂಡು ವಾಹನಗಳು ವೇಗವಾಗಿ ಸಂಚರಿಸುವಾಗ ಪಾದಚಾರಿ ವಿದ್ಯಾರ್ಥಿಗಳ ಮೇಲೆ ಕೆಸರು ನೀರು ಚಿಮ್ಮುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಅಸಹನೀಯ ಸ್ಥಿತಿಯಲ್ಲಿ ತರಗತಿಗೆ ಹಾಜರಾಗುವುದು ಅನಿವಾರ್ಯವೆಂಬಂತಾಗಿದೆ. ಮಳೆ ಬಂದಾಗೆಲ್ಲ ಈ ರಸ್ತೆಯಲ್ಲಿ ನಡೆದು ಸಾಗುವ ವಿದ್ಯಾರ್ಥಿಗಳಿಗೆ ಕೆಸರಿನ ಅಭಿಷೇಕ ಸಾಮಾನ್ಯವೆಂಬಂತಾಗಿದೆ.
ರಸ್ತೆಯುದ್ದಕೂ ಹೊಂಡ-ಗುಂಡಿಗಳು ತುಂಬಿದ್ದು, ದ್ವಿಚಕ್ರ ವಾಹನಗಳು ಹೊಂಡ ತಪ್ಪಿಸುವ ಭರದಲ್ಲಿ ವಿದ್ಯಾರ್ಥಿಗಳಿಗೆ ಡಿಕ್ಕಿಯಾಗುವ ಅಪಾಯವಿದೆ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಪ್ರಾಣಭಯದಿಂದಲೇ ಶಾಲೆಯತ್ತ ಹೆಜ್ಜೆ ಹಾಕುವಂತಾಗಿದೆ. ರಸ್ತೆ ದುಸ್ಥಿತಿ ಬಗ್ಗೆ ಅರಿವಿರುವ ವಿದ್ಯಾರ್ಥಿಗಳ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಾಗಿದೆ. ಈ ರಸ್ತೆ ಬಳಸಿ ಶಾಲೆಗೆ ತೆರಳಿದ ಮಕ್ಕಳು ಮರಳಿ ಮನೆ ಸೇರುವವರೆಗೂ ಪಾಲಕರು ಎದುರು ನೋಡುವಂತಾಗಿದೆ ಎಂಬ ಆರೋಪ ಕೇಳಿಬ,ದಿದೆ.