ಪೂವನಡ್ಕ ಸೇತುವೆ ಶೀಘ್ರ ಸಾಕಾರ

ಕೇರಳ ಭಾಗದಲ್ಲಿ ಸರ್ವೇ ಕಾರ್ಯ ನಡೆಸಿದ ಬಂಟ್ವಾಳದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.
ಕೇರಳ ಭಾಗದಲ್ಲಿ ಸರ್ವೇ ಕಾರ್ಯ ನಡೆಸಿದ ಬಂಟ್ವಾಳದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.
Published on
ಪುರುಷೋತ್ತಮ ಪೆರ್ಲ ಕಾಸರಗೋಡು
ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮತ್ತು ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕನ್ನು ಸಂಪರ್ಕಿಸಲು ಪೂವನಡ್ಕದಲ್ಲಿ ಶಿರಿಯಾ ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕೆಂಬ ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಬಂಟ್ವಾಳ ತಾಲೂಕು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿಲ-ಕಾಮಜಾಲು ಹಾಗೂ ಕಾಸರಗೋಡು ಜಿಲ್ಲೆಯ ಪೂವನಡ್ಕ ಹಾದಿಯಾಗಿ ಪೆರ್ಲಕ್ಕೆ ಸಂಪರ್ಕ ಕಲ್ಪಿಸುವ ಈ ಮಹತ್ವದ ಸೇತುವೆ ಕಾಮಗಾರಿಗೆ ಮಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 26 ಕೋಟಿ ರೂ. ಅನುದಾನವನ್ನು ಕರ್ನಾಟಕ ಸರ್ಕಾರ ಮಂಜೂರುಗೊಳಿಸಿದೆ.
ಕೇರಳ ಭಾಗದಲ್ಲಿ ಸೇತುವೆ ನಿರ್ಮಾಣದ ಸರ್ವೇ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಸೇತುವೆ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದ್ದು ಎರಡೂವರೆ ದಶಕಗಳಿಂದ ಚಾತಕಪಕ್ಷಿಗಳಂತೆ ಕಾದುಕುಳಿತಿದ್ದ ಉಭಯ ತಾಲೂಕಿನ ಜನತೆಯ ಮುಖದಲ್ಲಿ ಮಂದಹಾಸ ಮೂಡಿದೆ.

ಪೆರ್ಲದಿಂದ ಕೇವಲ ಆರೂವರೆ ಕಿ.ಮೀ. ದೂರದಲ್ಲಿರುವ ಪೂವನಡ್ಕದ ಶಿರಿಯಾ ಹೊಳೆ ದಾಟಿದರೆ ಬಂಟ್ವಾಳ ತಾಲೂಕಿನ ಮಾಣಿಲ, ಮುರುವ, ಪೆರುವಾಯಿ ಮುಂತಾದ ಪ್ರದೇಶಗಳನ್ನು ಸುಲಭವಾಗಿ ಸಂಪರ್ಕಿಸಬಹುದು. ಆದರೆ ಸರ್ವಋತು ಸಂಚಾರ ಯೋಗ್ಯವಾದ ರಸ್ತೆ ಇಲ್ಲದಿರುವುದರಿಂದ ಎರಡೂ ಪ್ರದೇಶದ ಜನತೆ ಸಂಕಷ್ಟ ಅನುಭವಿಸಬೇಕಾಗಿತ್ತು. ಮುರುವ ಪ್ರದೇಶದ ಜನತೆಗೆ ಪೆರ್ಲಕ್ಕೆ ಅಥವಾ ಪೆರ್ಲದ ಜನರು ಮುರುವ ಪ್ರದೇಶ ತಲುಪಬೇಕಾದರೆ 20 ಕಿ.ಮೀ.ಗೂ ಹೆಚ್ಚು ಕ್ರಮಿಸಬೇಕಾಗಿದೆ.
ಸೇತುವೆ ನಿರ್ಮಾಣಗೊಂಡಲ್ಲಿ 14 ಕಿ.ಮೀ.ಗಳಷ್ಟು ಅಂತರ ಕಡಿಮೆಯಾಗಲಿದೆ. ಈ ಹಿಂದೆ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಸೇತುವೆ ನಿರ್ಮಾಣಕ್ಕಾಗಿ ಶ್ರಮವಹಿಸಿದ್ದರು. ಹಾಲಿ ಶಾಸಕ ಅಶೋಕ್ ಕುಮಾರ್ ರೈ ವಿಧಾನಸಭಾ ಚುನಾವಣೆಯ ಸಂದರ್ಭ ಮಾಣಿಲ ಭಾಗದ ಜನರಿಗೆ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಶಾಸಕರಾದ ಬಳಿಕ ಯೋಜನೆಗೆ ಹಣ ಮಂಜೂರುಗೊಳಿಸಿ, ಸರ್ವೇ ಕಾರ್ಯಗಳನ್ನೂ ಪೂರ್ಣಗೊಳಿಸಿದ್ದಾರೆ. ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಮಾರ್ಚ್ ತಿಂಗಳಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರೊಂದಿಗೆ ಉದ್ದೇಶಿತ ಕಾಮಜಾಲು-ಪೂವನಡ್ಕ ಸೇತುವೆ ನಿರ್ಮಾಣ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಯೋಜನೆ ಮತ್ತಷ್ಟು ವೇಗ ಪಡೆದುಕೊಂಡಿತ್ತು.

ಪ್ರಗತಿಗೆ ಸಹಕಾರಿ

ಪೂವನಡ್ಕದಲ್ಲಿ ಶಿರಿಯಾ ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಾಣಗೊಂಡಲ್ಲಿ ಮಂಜೇಶ್ವರ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಲಿದೆ. ಪೆರ್ಲದಿಂದ ಪೂವನಡ್ಕ ಹಾದಿಯಾಗಿ ಕಾಮಜಾಲು-ಮುರುವ ಮೂಲಕ ಕನಿಯಾಲ ಧರ್ಮತ್ತಡ್ಕ ಭಾಗಕ್ಕೆ ಹಾಗೂ ಪೆರುವಾಯಿ ಮೂಲಕ ವಿಟ್ಲ, ಕನ್ಯಾನಕ್ಕೂ ಸಮೀಪದ ದಾರಿಯಾಗಲಿದೆ. ಈ ಮಧ್ಯೆ ಪೆರ್ಲ-ಪೂವನಡ್ಕ ರಸ್ತೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರಂಭಿಕ ಕೆಲಸಗಳು ಪ್ರಗತಿಯಲ್ಲಿವೆ.

ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಅನುಕೂಲ

ಸೇತುವೆ ಕಾಮಗಾರಿ ಪೂರ್ಣಗೊಂಡಲ್ಲಿ ಮಾಣಿಲ ಶ್ರೀಧಾಮ, ಬಾಳೆಕಲ್ಲು ಕೋಟಿಚೆನ್ನಯರ ಗರಡಿ, ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನಗಳಿಗೆ ಭೇಟಿ ನೀಡುಲು ಅನುಕೂಲವಾಗಲಿದ್ದು ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಅಲ್ಲದೆ ಪೆರ್ಲ ಪೇಟೆಯ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ. ಸೇತುವೆ ನಿರ್ಮಾಣಕ್ಕಾಗಿ ಎಣ್ಮಕಜೆ ಪಂಚಾಯಿತಿ ಹಾಗೂ ಕೇರಳದ ಲೋಕೋಪಯೋಗಿ ಇಲಾಖೆಯಿಂದಲೂ ಎನ್‌ಒಸಿ ಸಿಕ್ಕಿದೆ.

ಪೂವನಡ್ಕದಲ್ಲಿ ಸೇತುವೆ ನಿರ್ಮಣ ಕಾರ್ಯ ತ್ವರಿತಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕೇರಳದ ಭಾಗದಲ್ಲಿ ಸರ್ವೇ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸಂಪರ್ಕ ರಸ್ತೆ ಹಾದು ಹೋಗುವಲ್ಲಿ ಜಾಗದ ಅಗತ್ಯವಿದ್ದು, ಈಗಾಗಲೇ ಸ್ಥಳೀಯರ ಜತೆ ಮಾತುಕತೆ ನಡೆಸಲಾಗಿದೆ. ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವಲ್ಲಿ ಮಂಜೇಶ್ವರ ಶಾಸಕರನ್ನೂ ಮನವೊಲಿಸಲಾಗುವುದು. ಮಂಜೇಶ್ವರ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಜನತೆಗೆ ಹೆಚ್ಚು ಪ್ರಯೋಜನಕಾರಿಯಾಗಲಿರುವ ಸೇತುವೆ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸುವ ಬಗ್ಗೆ ಪುತ್ತೂರು ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net