ಕೊಣಾಜೆ ಜಂಕ್ಷನ್‌ನಲ್ಲಿ ಕಲುಷಿತ ನೀರು

ಕೊಣಾಜೆ ಜಂಕ್ಷನ್‌ನಲ್ಲಿ ರಸ್ತೆಯಲ್ಲೇ ಹರಿಯುತ್ತಿರುವ ವಿವಿ ಹಾಸ್ಟೆಲ್‌ನ ಕಲುಷಿತ ನೀರು.
ಕೊಣಾಜೆ ಜಂಕ್ಷನ್‌ನಲ್ಲಿ ರಸ್ತೆಯಲ್ಲೇ ಹರಿಯುತ್ತಿರುವ ವಿವಿ ಹಾಸ್ಟೆಲ್‌ನ ಕಲುಷಿತ ನೀರು.
Published on
ಅನ್ಸಾರ್ ಇನೋಳಿ ಉಳ್ಳಾಲ
ಮಂಗಳೂರು ವಿಶ್ವವಿದ್ಯಾಲಯದ ವಸತಿ ನಿಲಯಗಳಿಂದ ಹರಿದು ಬರುತ್ತಿರುವ ಶೌಚಗೃಹದ ಕಲುಷಿತ ನೀರು ಕೊಣಾಜೆ ಜಂಕ್ಷನ್‌ನಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನಿರಂತರ ತಲೆನೋವಾಗಿ ಪರಿಣಮಿಸಿದೆ. ದುರ್ನಾತ ಮತ್ತು ಸೊಳ್ಳೆಗಳ ಕಾಟದಿಂದ ಸ್ಥಳೀಯರು ಹಾಗೂ ಪ್ರಯಾಣಿಕರು ರೋಸಿ ಹೋಗಿದ್ದಾರೆ.
ವಸತಿ ನಿಲಯಗಳ ಅವಾಂತರ: ಮಹಿಳಾ ವಸತಿ ನಿಲಯ ಹಾಗೂ ಬಿಎಸ್‌ಎನ್‌ಎಲ್ ಕಚೇರಿ ಬಳಿಯ ವಸತಿ ನಿಲಯದಿಂದ ಶೌಚಗೃಹದ ನೀರು ನೇರವಾಗಿ ಮುಖ್ಯ ರಸ್ತೆಯ ಮೇಲೆ ಹರಿಯುತ್ತಿದೆ. ರಸ್ತೆ ಬದಿ ನೀರು ನಿಂತು ಸೊಳ್ಳೆಗಳ ಆವಾಸಸ್ಥಾನವಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಸ್ಥಳೀಯ ನಿವಾಸಿಗಳು ಬದುಕುವಂತಾಗಿದೆ. ಬಸ್ ತಂಗುದಾಣದ ಸುತ್ತಲೂ ಕೊಳಚೆ ನೀರು ಹರಿಯುತ್ತಿರುವುದರಿಂದ ಪ್ರಯಾಣಿಕರು ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿವಿ ಆಡಳಿತದ ಮೌನ ಮತ್ತು ನಿರ್ಲಕ್ಷ್ಯ

ಮಂಗಳೂರು ವಿವಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜನಸಾಮಾನ್ಯರಿಗೆ ಸ್ವಚ್ಛತೆಯ ಪಾಠ ಕಲಿಸಬೇಕಾದ ಜವಾಬ್ದಾರಿ ಹೊಂದಿದೆ. ಆದರೆ, ಅದೇ ಸಂಸ್ಥೆ ಕೊಣಾಜೆ ಗ್ರಾಮಕ್ಕೆ ‘ಕೊಳಚೆ ನೀರಿನ ಕೊಡುಗೆ’ ನೀಡುತ್ತಿರುವುದು ದುರಂತ. ನಾಲ್ಕು ವರ್ಷಗಳ ಹಿಂದೆ ವಿಜಯವಾಣಿ ಪತ್ರಿಕೆಯ ವರದಿಯ ನಂತರ ತಾತ್ಕಾಲಿಕ ಪರಿಹಾರ ಸಿಕ್ಕಿತ್ತಾದರೂ, ಇದೀಗ ಸಮಸ್ಯೆ ಮತ್ತೆ ಮರುಕಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೂವರು ಕುಲಪತಿಗಳು ಬದಲಾಗಿದ್ದರೂ, ಈಗಿನ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರವರೆಗೆ ಎಲ್ಲರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯಿತಿಯಿಂದ ನೋಟಿಸ್ ಜಾರಿಯಾದರೂ ವಿವಿ ಆಡಳಿತ ಸ್ಪಂದಿಸುತ್ತಿಲ್ಲ.

ವಿವಿ ಕುಲಪತಿಗೆ ಎಚ್ಚರಿಕೆ

ಸಮಸ್ಯೆಯ ಗಂಭೀರತೆಯನ್ನು ಅರಿತು, ತುರ್ತು ಆಧಾರದಲ್ಲಿ ಚರಂಡಿ ದುರಸ್ತಿ ಮತ್ತು ಶಾಶ್ವತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಡಿಪಿಐ ಸಂಘಟನೆ ವಿವಿ ಕುಲಪತಿಗೆ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಈ ವಿಷಯವನ್ನು ನೂತನ ಕುಲಸಚಿವ ಸಂತೋಷ್ ಬಿ. ಜಗಲಸಾರರವರ ಗಮನಕ್ಕೆ ತರಲಾಗಿದ್ದು, ಅವರು ಸಮಸ್ಯೆ ತಮಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಶೌಚನೀರಿನ ಸಮಸ್ಯೆಯಿದ್ದು ಎಲ್ಲಾ ಕುಲಪತಿಗಳಿಗೆ ಮನವಿ ನೀಡಲಾಗಿದೆ. ಎಲ್ಲಾ ಗ್ರಾಮಸಭೆಗಳಲ್ಲಿ ವಿಷಯ ಪ್ರಸ್ತಾಪಿಸಲಾಗಿದ್ದರೂ ಪ್ರಯೋಜನ ಶೂನ್ಯ. ಇದೀಗ ಮತ್ತೆ ಕುಲಪತಿ, ಹೊಸ ಕುಲಸಚಿವರಿಗೆ ಮನವಿ ಮಾಡಲಾಗಿದೆ. ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ.

ವಿವಿ ವಸತಿ ನಿಲಯದ ಶೌಚನೀರು ಸಾರ್ವಜನಿಕ ಸ್ಥಳದಲ್ಲಿ ಹರಿದಾಡುತ್ತಿರುವ ಬಗ್ಗೆ ಒಂದು ಬಾರಿ ವಿವಿ ಕುಲಪತಿ ಜತೆ ಮಾತುಕತೆ ನಡೆಸಲಾಗಿದೆ. ಸಮಸ್ಯೆ ಬಗೆಹರಿಯದ ಕಾರಣ ನೋಟಿಸ್ ನೀಡಿ ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಕಸ ಸುಡುವ ಬಗ್ಗೆ ದಂಡ ವಿಧಿಸಿದರೂ ಪಾವತಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net