ಬಂದೂಕು ಒಪ್ಪಿಸುವಂತೆ ರೈತರಿಗೆ ಪೊಲೀಸರ ಸೂಚನೆ

ಭಾರತೀಯ ಕಿಸಾನ್​ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.
ಭಾರತೀಯ ಕಿಸಾನ್​ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.
Published on

ಉಡುಪಿ 

ಜಿಲ್ಲಾ ಭಾರತೀಯ ಕಿಸಾನ್​ ಸಂಘದ ಉಡುಪ ಖಂಡನೆ

* ಬೆಳೆದ ಬೆಳೆ ಹಾನಿಯಾದರೆ ಜಿಲ್ಲಾಡಳಿತವೇ ಹೊಣೆ

ಉಡುಪಿ: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ರೈತರು ಇಟ್ಟುಕೊಂಡಿರುವ ಬಂದೂಕು (ಮಸಿ ಕೋವಿ)ಗಳನ್ನು ಸರಿಯಾದ ಕಾರಣವಿಲ್ಲದೆ ಪೊಲೀಸ್​ ಠಾಣೆಗೆ ಒಪ್ಪಿಸುವಂತೆ ತಿಳಿಸಲಾಗುತ್ತಿದ್ದು, ಇಲಾಖೆ ಕ್ರಮವನ್ನು ಉಡುಪಿ ಜಿಲ್ಲಾ ಭಾರತೀಯ ಕಿಸಾನ್​ ಸಂಘ ವಿರೋಧಿಸಿದೆ.
ಜಿಲ್ಲೆಯಲ್ಲಿ ಪರವಾನಗಿ ಸಹಿತ ಬಂದೂಕು ಹೊಂದಿರುವ ರೈತರಿಗೆ ವಾರದಿಂದ ಸ್ಥಳೀಯ ಪೊಲೀಸ್​ ಠಾಣೆಯಿಂದ ದೂರವಾಣಿ ಕರೆ ಬರುತ್ತಿದ್ದು, ಕೂಡಲೇ ಬಂದೂಕು ಡೆಪಾಸಿಟ್​ ಮಾಡುವಂತೆ ತಿಳಿಸಲಾಗುತ್ತಿದೆ. ಚುನಾವಣಾ ಸಂದರ್ಭದಲ್ಲಿ ಬಂದೂಕು ಒಪ್ಪಿಸುವುದು ಪದ್ಧತಿ. ಆದರೆ, ಈಗ ಯಾವುದೇ ಚುನಾವಣೆ ಇಲ್ಲದಿದ್ದರೂ ಸಹ ಏಕಾಏಕಿ ಬಂದೂಕು ಒಪ್ಪಿಸಿ ಎನ್ನುತ್ತಿರುವುದು ಏಕೆಂದು ಸಂದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪ್ರಶ್ನಿಸಿದ್ದಾರೆ.

ಕಾಡು ಪ್ರಾಣಿಗಳ ಉಪಟಳ

ಕಾರಣ ಕೇಳಿದರೆ ಎಸ್ಪಿ ಕಚೇರಿಯಿಂದ ಆದೇಶ ಬಂದಿರುವುದಾಗಿ ತಿಳಿಸುತ್ತಿದ್ದಾರೆ. ಮಳೆಗಾಲ ಮುಕ್ತಾಯದ ಹಂತದಲ್ಲಿ ಕಾಡುಗಳಲ್ಲಿ ಹಣ್ಣು-ಹಂಪಲು ಲಭ್ಯವಿಲ್ಲ. ಹೀಗಾಗಿ ರೈತರು ಬೆಳೆದ ಕೃಷಿಗಳಿಗೆ ಮಂಗ, ಹಂದಿ ಇನ್ನಿತರ ಪ್ರಾಣಿಗಳ ಉಪಟಳ ಹೆಚ್ಚುತ್ತಿದೆ. ಪ್ರತಿನಿತ್ಯ ಅವುಗಳನ್ನು ಕಾದು ಓಡಿಸುವುದು ಈ ಸಮಯದ ಮುಖ್ಯ ಕೆಲಸವಾಗಿದೆ. ಬಂದೂಕುಗಳನ್ನು ಠಾಣೆಗೆ ಒಪ್ಪಿಸಿದರೆ ಬೆಳೆದು ನಿಂತಿರುವ ಭತ್ತ, ತೆಂಗು, ಅಡಿಕೆ, ಬಾಳೆ ಇನ್ನಿತರ ಬೆಳೆ ರಕ್ಷಣೆ ಕಷ್ಟವಾಗುತ್ತದೆ. 

ಬೆಳೆ ಹಾನಿಗೆ ಯಾರು ಹೊಣೆ?:

ಜಿಲ್ಲೆಯಲ್ಲಿ ಸಾಕಷ್ಟು ಅಕ್ರಮ ಬಂದೂಕುಗಳಿದ್ದು, ಪ್ರಾಣಿ ಬೇಟೆಯಾಡುತ್ತಿರುವ ಬಗ್ಗೆ ದೂರುಗಳಿವೆ. ಅದರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್​ ಇಲಾಖೆ, ಪ್ರಾಣಿಗಳನ್ನು ಬೆದರಿಸಿ ತಮ್ಮ ಬೆಳೆ ರಕ್ಷಿಸಿಕೊಳ್ಳಲು ಹೆಣಗಾಡುವ ರೈತರಿಂದ ಬಂದೂಕು ಪಡೆಯುವುದು ಸೂಕ್ತವಲ್ಲ. ಜಿಲ್ಲಾಡಳಿತ, ಪೊಲೀಸ್​, ಅರಣ್ಯ, ವನ್ಯಜೀವಿ ಇಲಾಖೆಗಳಿಗೆ ಅಲೆದು ಬಂದೂಕು ಪರವಾನಗಿ ಪಡೆದಿರುತ್ತಾರೆ. ಕಾಲಕಾಲಕ್ಕೆ ಸಾವಿರಾರು ರೂ. ಕಟ್ಟಿ ನವೀಕರಣ ಮಾಡುತ್ತಾರೆ. ಕಳೆದ ಮೂರು ತಿಂಗಳ ಹಿಂದಷ್ಟೇ ಎಲ್ಲ ರೈತರ ಬಂದೂಕುಗಳನ್ನು ಠಾಣೆಗೆ ತರಿಸಿ ತಪಾಸಣೆ ಮಾಡಿದ್ದಾರೆ. ಇದೀಗ ಮತ್ತೆ ಬಂದೂಕು ಒಪ್ಪಿಸುವಂತೆ ಸೂಚಿಸುತ್ತಿದ್ದಾರೆ. ಹೀಗಾಗಿ ಕಾಡುಪ್ರಾಣಿಗಳಿಂದ ರೈತರಿಗೆ ಉಂಟಾಗುವ ಬೆಳೆ ನಷ್ಟಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆಯನ್ನೇ ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"

ಈ ವಿಚಾರವಾಗಿ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ಎಸ್ಪಿ ಮತ್ತು ಡಿಸಿಗೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿದ್ದಾರೆ. ಜಿಲ್ಲಾಡಳಿತ ತನ್ನ ಆದೇಶ ಹಿಂಪಡೆಯದಿದಲ್ಲಿ ರೈತರು ತಮ್ಮ ಬೆಳೆ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳಲು ಹೋರಾಟ ಮಾಡುವುದು ಅನಿವಾರ್ಯ.

— ಸತ್ಯನಾರಾಯಣ ಉಡುಪ. ಭಾರತೀಯ ಕಿಸಾನ್​ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net