ಸಿಕ್ಕಿಲ್ಲ ಪಿಎಂ ಆವಾಸ್ ಯೋಜನೆ ಲಾಭ

 ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಗ್ರಾಮಸಭೆ ಪಿಡಿಒ ಅನಿತಾ ಕ್ಯಾಥರಿನ್ ಮಾತನಾಡಿದರು. ನೋಡಲ್ ಅಧಿಕಾರಿ ಪ್ರವೀಣ್ ಕೆ., ಸೀತಾ, ಸುಜಿತ್ ಮೊದಲಾದವರಿದ್ದರು.
ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಗ್ರಾಮಸಭೆ ಪಿಡಿಒ ಅನಿತಾ ಕ್ಯಾಥರಿನ್ ಮಾತನಾಡಿದರು. ನೋಡಲ್ ಅಧಿಕಾರಿ ಪ್ರವೀಣ್ ಕೆ., ಸೀತಾ, ಸುಜಿತ್ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗುರುಪುರ
ಉಳಾಯಿಬೆಟ್ಟು ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಬುಧವಾರ ಪಂಚಾಯಿತಿಯ ಫಲ್ಗುಣಿ ಸಭಾಭವನದಲ್ಲಿ ನಡೆಯಿತು.
ಗ್ರಾಮಸ್ಥ ರಾಜೀವ ಶೆಟ್ಟಿ ಸಲ್ಲಾಜೆ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಉಳಾಯಿಬೆಟ್ಟು ಪಂಚಾಯಿತಿಗೆ ಒಂದೇ ಒಂದು ಮನೆ ಸಿಕ್ಕಿಲ್ಲ. ಹಾಗಾದರೆ ಕೇಂದ್ರ ಸುಳ್ಳು ಜಾಹೀರಾತು ನೀಡುತ್ತಿದೆಯೇ? ಅರ್ಜಿ ನೀಡಿದವರ ಗತಿ ಏನು? ಕಳೆದ ಒಂದೆರಡು ವರ್ಷದಿಂದ ಆಸ್ತಿ ತೆರಿಗೆ ಪರಿಷ್ಕರಣೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಮನೆಮಂದಿಗೆ ತೆರಿಗೆ ಹೊರೆ ತಪ್ಪಿಲ್ಲ ಎಂದು ದೂರಿದರು.
ಪಿಡಿಒ ಅನಿತಾ ಕ್ಯಾಥರಿನ್ ಉತ್ತರಿಸುತ್ತ, ಜಾಗದ ಮೌಲ್ಯವಾಧರಿಸಿ ತೆರಿಗೆ ಹೆಚ್ಚುತ್ತದೆ. ಪ್ರಧಾನಿ ಆವಾಸ್ ಯೋಜನೆಯಡಿ ಉಳಾಯಿಬೆಟ್ಟು ಪಂಚಾಯಿತಿ ವ್ಯಾಪ್ತಿಯಲ್ಲೂ ಮನೆ ಕಲ್ಪಿಸುವ ಪ್ರಯತ್ನ ನಡೆಸಲಾಗುವುದು. ತೆರಿಗೆ ನಿರ್ಣಯ ವಿಷಯದಲ್ಲಿ ಪಂಚಾಯಿತಿಯಲ್ಲೇ ತೀರ್ಮಾನಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಭರವಸೆ ನೀಡಿದರು.
ಗ್ರಾಮಸ್ಥರ ಬೇಡಿಕೆಗಳ ಮೇಲೆ ನಿರ್ಣಯ ಬರೆಸಿಕೊಂಡ ನೋಡಲ್ ಅಧಿಕಾರಿ ಪ್ರವೀಣ್ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಬೆಳೆ ವಿಮೆ, ಬೆಳೆ ಸಮೀಕ್ಷೆ ಮತ್ತಿತರ ಮಹತ್ವ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಪಂಚಾಯಿತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಕಮಲಾಕ್ಷ ಎನ್. ಗತ ಗ್ರಾಮಸಭೆಯ ಅನುಪಾಲನಾ ವರದಿ ಮಂಡಿಸಿದರು. ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮಂಗಳೂರು(ಗ್ರಾಮಾಂತರ) ಮೇಲ್ವಿಚಾರಕಿ ಸೀತಾ, ಜಿಪಂ ಇಂಜಿನಿಯರ್ ಸುಜಿತ್, ಉಳಾಯಿಬೆಟ್ಟು ಸರ್ಕಾರಿ ಹಿ.ಪ್ರಾ. ಶಾಲಾ ಶಿಕ್ಷಕ ಚೇತನ್ ಕೊಪ್ಪ, ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರಿ ವೈದ್ಯಾಧಿಕಾರಿ ಡಾ.ಚೈತನ್ಯಾ, ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.

ಸುರಕ್ಷತೆಗೆ ಬೇಕಿದೆ ಕ್ರಮ

ಕುಸಿಯುವ ಹಂತ ತಲುಪಿರುವ ಆಚೆಬೈಲು ಪ್ರದೇಶದ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಭೂಕುಸಿತ ಉಂಟಾಗಿರುವ ಕೈಗುರಿಯಲ್ಲಿ ಇನ್ನೂ ರಸ್ತೆ ದುರಸ್ತಿ ನಡೆದಿಲ್ಲ. ಅಲ್ಲಿಗೆ ಮಂಜೂರಾಗಿರುವ 55 ಲಕ್ಷ ರೂ. ಅನುದಾನ ನಿರ್ಮಿತಿ ಕೇಂದ್ರಕ್ಕೆ ಹೋಗಿದೆ. ಡಿಸಿಯೊಂದಿಗೆ ಚರ್ಚಿಸಿ, ಆ ಅನುದಾನದಲ್ಲಿ ಕೈಗುರಿ ರಸ್ತೆ ಕಾಮಗಾರಿ ನಡೆಸಬೇಕು ಎಂದು ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಹರಿಕೇಶ್ ಶೆಟ್ಟಿ ಆಗ್ರಹಿಸಿದರು.

ಕೇಳಿಬಂದ ದೂರು, ಬೇಡಿಕೆ

* ಕೆಲವೆಡೆ ಹಗಲೂ ಉರಿಯುತ್ತಿರುವ ದಾರಿದೀಪಗಳು
* ರಾತ್ರಿ ವೇಳೆ ಪೊಲೀಸ್ ಬೀಟ್ ಇಲ್ಲದ ಇಲ್ಲಿನ ನಾಗರಿಕರಲ್ಲಿ ಭೀತಿ ವಾತಾವರಣ ಹೆಚ್ಚಳ
* ರಸ್ತೆಗೆ ಅಗತ್ಯ ಸೀಸಿ ಕ್ಯಾಮರಾ ಅಳವಡಿಸಿಲ್ಲ
* ಕಸ ವಿಲೇವಾರಿಯತ್ತ ಸೂಕ್ತ ಗಮನಹರಿಸಬೇಕು
* ಮಂಗಳೂರು ನಗರ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಉಳಾಯಿಬೆಟ್ಟು ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ಶಾಶ್ವತ ಚರಂಡಿ ನಿರ್ಮಿಸಬೇಕು
* ಹೆದ್ದಾರಿಯಿಂದ ಉಳಾಯಿಬೆಟ್ಟು ಸಂಪರ್ಕಕ್ಕೆ ಅಂಡರ್‌ಪಾಸ್ ಕಲ್ಪಿಸಲು ಎನ್‌ಎಚ್‌ನೊಂದಿಗೆ ಮಾತುಕತೆ ನಡೆಸಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net