ರಸ್ತೆ ಅಭಿವೃದ್ಧಿಗೆ ಮೀನಮೇಷ!

 ಮರವಂತೆ ಬಂದರು ಸಂಪರ್ಕಿಸುವ ರಸ್ತೆ ಹದಗೆಟ್ಟಿರುವುದು.
ಮರವಂತೆ ಬಂದರು ಸಂಪರ್ಕಿಸುವ ರಸ್ತೆ ಹದಗೆಟ್ಟಿರುವುದು.
Published on
ರಾಘವೇಂದ್ರ ಪೈ ಗಂಗೊಳ್ಳಿ
ಮರವಂತೆಯ ಹೊರಬಂದರಿಗೆ ತೆರಳುವ ಮೀನುಗಾರಿಕಾ ರಸ್ತೆ ಅಭಿವೃದ್ಧಿಗೆ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಮೀನಮೇಷ ಎಣಿಸುತ್ತಿದ್ದು, ಇದರಿಂದ ಮೀನುಗಾರರು ಸಹಿತ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಕೇವಲ 500 ಮೀ. ರಸ್ತೆ ಕಾಂಕ್ರೀಟ್ ಅಳವಡಿಕೆ ಬಾಕಿಯಿದ್ದು, ಅದಕ್ಕಿನ್ನೂ ಕಾಲ ಕೂಡಿಬಂದಿಲ್ಲ.
ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಿಂದ ಮೀನುಗಾರಿಕಾ ಹೊರಬಂದರಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಒಟ್ಟು 1 ಕಿ.ಮೀ. ದೂರದ ರಸ್ತೆಯ ಪೈಕಿ ಈಗಾಗಲೇ 3 ವರ್ಷಗಳ ಹಿಂದೆಯೇ 500 ಮೀ.ವರೆಗೆ ಕಾಂಕ್ರೀಟ್ ಕಾಮಗಾರಿಯಾಗಿದೆ. ಆದರೆ ಬಾಕಿ ಉಳಿದ 500 ಮೀ. ರಸ್ತೆ ಕಾಂಕ್ರೀಟ್ ವಾತ್ರ ಇಂದು ನಾಳೆ ಅನ್ನುವುದರಲ್ಲಿಯೇ ದಿನ ಕಳೆಯುತ್ತಿದೆ.

ಮೀನು ಸಾಗಾಟಕ್ಕೆ ಸಮಸ್ಯೆ

ಹೆದ್ದಾರಿಯಿಂದ ಇದೇ ವಾರ್ಗವಾಗಿ ಬಂದರಿಗೆ ಮೀನು ಸಾಗಾಟದ ಇನ್ಸುಲೇಟರ್ ಸಹಿತ ಇತರ ವಾಹನಗಳು, ಐಸ್ ಪೂರೈಸುವ ವಾಹನಗಳು ಸಂಚರಿಸುತ್ತವೆ. ಆದರೆ ಸಂಪೂರ್ಣ ಹದಗೆಟ್ಟಿರುವ ಈ ರಸ್ತೆ ಅವ್ಯವಸ್ಥೆಯಿಂದಾಗಿ ಎಲ್ಲರೂ ಸಂಕಷ್ಟ ಅನುಭವಿಸುವಂತಾಗಿದೆ. ಮೀನುಗಾರರ ಸಹಿತ ನಿತ್ಯ ನೂರಾರು ಮಂದಿ ಈ ರಸ್ತೆಯನ್ನು ಆಶ್ರಯಿಸಿದ್ದಾರೆ.
ಇಲ್ಲ ಕಾಂಕ್ರೀಟ್ ರಸ್ತೆ ಭಾಗ್ಯ
ಮೊದಲ ಹಂತದಲ್ಲಿ 350 ಮೀ. ಹಾಗೂ 190 ಮೀ. ರಸ್ತೆಗೆ 3 ವರ್ಷಗಳ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಆಗ ಶಾಸಕರಾಗಿದ್ದ ಬಿ.ಎಂ.ಸುಕುವಾರ್ ಶೆಟ್ಟಿ ಸಹಕಾರದಲ್ಲಿ ಕಾಂಕ್ರೀಟ್ ನಡೆದಿತ್ತು. ಬಾಕಿ ಉಳಿದ ರಸ್ತೆ ಹದಗೆಟ್ಟ ವೇಳೆ ಅನುದಾನ ಮೀಸಲಿಡುವುದಾಗಿ ಹೇಳಿದ್ದರೂ ಆಗ ಬಂದರಿನ ಕಾಮಗಾರಿ ಮುಗಿದ ಬಳಿಕ ಈ ರಸ್ತೆ ಅಭಿವೃದ್ಧಿಪಡಿಸಿದರೆ ಉತ್ತಮ ಎನ್ನುವುದಾಗಿ ಜನರು ಹೇಳಿದ್ದರು. ಆದರೆ ಈಗ ಬಂದರಿನ ಕಾಮಗಾರಿಯೂ ಆರಂಭಗೊಂಡಿಲ್ಲ, ಈ ರಸ್ತೆಗೆ ಕಾಂಕ್ರೀಟ್ ಭಾಗ್ಯವೂ ಇಲ್ಲದಂತಾಗಿದೆ.

ಹೆಚ್ಚು ಆದಾಯ ಬರುವ ವಲಯ

ಅತಿ ಹೆಚ್ಚು ಆದಾಯ ಬರುವ ವಲಯಗಳಲ್ಲಿ ಒಂದಾಗಿರುವ ಮೀನುಗಾರಿಕೆ ಸಂಬಂಧಪಟ್ಟ ಈ ರಸ್ತೆ ದುಸ್ಥಿತಿಯೇ ಹೀಗಾದರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಈ ಬಗ್ಗೆ ಇನ್ನಾದರೂ ಮೀನುಗಾರಿಕೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ, ರಸ್ತೆ ಅಭಿವೃದ್ಧಿಗೆ ಮುಂದಾಗಲಿ ಎನ್ನುವುದು ಮೀನುಗಾರರ ಆಗ್ರಹವಾಗಿದೆ.

ಈ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಪಂಚಾಯಿತಿ ಅನುದಾನದಲ್ಲಿ ಕಷ್ಟ. ಅದಕ್ಕಾಗಿ ಈ ಹಿಂದೆಯೇ ಪಂಚಾಯಿತಿಯಿಂದ ಆಗಿನ ಶಾಸಕರು, ಸಂಬಂಧಪಟ್ಟ ಮೀನುಗಾರಿಕಾ ಇಲಾಖೆಗೂ ಮನವಿ ಸಲ್ಲಿಸಲಾಗಿದೆ. ಈಗ ಮತ್ತೆ ಶಾಸಕರು, ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net