ಗೋಶಾಲೆ ಆರಂಭಕ್ಕೆ ಮೀನಮೇಷ

 ಸುಳ್ಯ ಕೊಡಿಯಾಲಬೈಲಿನಲ್ಲಿರುವ ಗೋಶಾಲೆ ಕಟ್ಟಡ.
ಸುಳ್ಯ ಕೊಡಿಯಾಲಬೈಲಿನಲ್ಲಿರುವ ಗೋಶಾಲೆ ಕಟ್ಟಡ.
Published on
ಗಂಗಾಧರ ಕಲ್ಲಪಳ್ಳಿ
ಅಶಕ್ತ ಹಾಗೂ ಬಿಡಾಡಿ ಜಾನುವಾರುಗಳಿಗೆ ಆಶ್ರಯತಾಣ ಒದಗಿಸಬೇಕು ಎಂಬ ಉದ್ದೇಶದಿಂದ ಸುಳ್ಯ ನಗರದ ಸಮೀಪದ ಕೊಡಿಯಾಲಬೈಲಿನಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಗೋಶಾಲೆ ಉದ್ಘಾಟನೆಯಾಗದೆ, ಕಟ್ಟಡದ ಸುತ್ತ ಕಾಡು ಬೆಳೆದು ಪಾಳುಕೊಂಪೆಯಂತಾಗಿದೆ. ಸುಸಜ್ಜಿತ ವ್ಯವಸ್ಥೆಯೊಂದಿಗೆ ಕಟ್ಟಡ ನಿರ್ಮಾಣಗೊಂಡು ವರ್ಷಗಳು ಹಲವು ಕಳೆದರೂ, ಗೋಶಾಲೆ ನಿರ್ವಹಣೆಗೆ ಸಂಬಂಧಿಸಿದ ಇತರ ಸೌಕರ್ಯ ಒದಗಿಸದಿರುವುದರಿಂದ ಗೋಶಾಲೆ ಕಾರ್ಯ ಆರಂಭಕ್ಕೆ ಮೀನಮೇಷ ಎಣಿಸುವಂತಾಗಿದೆ.
ಅನುದಾನ ಕೊರತೆ: ಕೋಡಿಯಾಲಬೈಲಿನ 7.7 ಎಕರೆ ಜಾಗದಲ್ಲಿ ಪಶು ಸಂಗೋಪನಾ ಇಲಾಖೆ ಅನುದಾನದಲ್ಲಿ ಗೋಶಾಲೆ ಕಟ್ಟಡ ನಿರ್ಮಾಣವಾಗಿದ್ದು, ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಇಲ್ಲಿಗೆ ಗೋವುಗಳನ್ನು ಸೇರಿಸಲು ಸಾಧ್ಯವಾಗಿಲ್ಲ. ಗೋವುಗಳ ಲಾಲನೆ ಪಾಲನೆ ಮತ್ತು ಗೋಶಾಲೆಗೆ ನಿರ್ವಹಣೆಗೆ ಬೇಕಾದ ವ್ಯವಸ್ಥೆಗೆ ಇನ್ನಷ್ಟು ಹೆಚ್ಚುವರಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿದ್ದರೂ ಅನುದಾನ ಬಿಡುಗಡೆಯಾಗದೆ ಗೋಶಾಲೆ ಆರಂಭಕ್ಕೆ ವಿಘ್ನ ಎದುರಾಗಿದೆ.
ಸುಳ್ಯಕ್ಕೊಂದು ಸುಂದರ ಗೋಶಾಲೆ ಬೇಕು, ಬಿಡಾಡಿ ಜಾನುವಾರುಗಳಿಗೆ, ಅಶಕ್ತ ಗೋವುಗಳಿಗೆ ಒಂದು ಆಶ್ರಯ ತಾಣ ಬೇಕು ಎಂಬ ಉದ್ದೇಶದಿಂದ ಎಸ್.ಅಂಗಾರ ಸಚಿವರಾಗಿದ್ದ ಸಂದರ್ಭ ಗೋಶಾಲೆ ನಿರ್ಮಾಣ ಮಾಡಲಾಗಿತ್ತು. ಕೊಡಿಯಾಲಬೈಲಿನ ಪಶುಪಾಲನಾ ಇಲಾಖೆ ವಿಶಾಲ ಪ್ರದೇಶದಲ್ಲಿ ಸುಸಜ್ಜಿತ ಗೋಶಾಲೆ ನಿರ್ಮಾಣವಾಗಿ 80 ಗೋವುಗಳಿಗೆ ಆಶ್ರಯ ನೀಡಲು ಯೋಜನೆ ರೂಪಿಸಲಾಗಿತ್ತು.
50 ಲಕ್ಷ ರೂ. ವೆಚ್ಚದಲ್ಲಿ ನೂತನ ಗೋಶಾಲೆಗೆ ವಿಶಾಲವಾದ ಶೆಡ್, ಸ್ಥಳಕ್ಕೆ ಸುತ್ತಲೂ ಬೇಲಿ, 50 ಸಾವಿರ ಲಿಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, ನೀರಿಗಾಗಿ ಬೋರ್‌ವೆಲ್ ಮತ್ತಿತರ ಯೋಜನೆ ರೂಪಿಸಲಾಗಿತ್ತು. ಕಟ್ಟಡ, ಟ್ಯಾಂಕ್ ನಿರ್ಮಾಣ, ಬೋರ್‌ವೆಲ್, ಪ್ಲಂಬಿಂಗ್ ಕಾರ್ಯ ಕಾಮಗಾರಿ ನಡೆದಿದೆ. ಅಷ್ಟರಲ್ಲಿ ಅಂಗಾರರ ಅಧಿಕಾರ ಅವಧಿ ಮುಗಿಯಿತು. ರಾಜ್ಯದಲ್ಲಿ ಸರ್ಕಾರವೂ ಬದಲಾಯಿತು. ಬಳಿಕ ಮೂಲ ಅಗತ್ಯಕ್ಕೆ ಅನುದಾನ ಬಾರದೆ ಯೋಜನೆ ನನೆಗುದಿಗೆ ಬಿದ್ದಿದೆ.

ಯೋಜನೆ ನನೆಗುದಿಗೆ

ಶಾಸಕಿ ಭಾಗೀರಥಿ ಮುರುಳ್ಯ ಗೋಶಾಲೆ ಆರಂಭಕ್ಕೆ ನಿರಂತರ ಪ್ರಯತ್ನ ನಡೆಸುತ್ತಾ ಬಂದರೂ ಅನುದಾನ ಬಿಡುಗಡೆ ಆಗಿಲ್ಲ. ಪಶು ಆಹಾರ ಸಂಗ್ರಹ ಗೋದಾಮು, ಹುಲ್ಲು ಸಂಗ್ರಾಹಾಗಾರ, ಸಿಬ್ಬಂದಿ ವಸತಿಗೃಹ, ಮೇವು ಬೆಳೆಸಲು ಹುಲ್ಲುಗಾವಲು ಬೆಳೆಯಲು ಮತ್ತಿತರ ಅಗತ್ಯತೆಗಳಿಗೆ 36.54 ಲಕ್ಷ ರೂ. ಅನುದಾನದ ಬೇಡಿಕೆ ಇರಿಸಿ ಇಲಾಖೆ ವತಿಯಿಂದ ಪ್ರಸ್ತಾವನೆ ಸಲ್ಲಿಸಿದರೂ ಸರ್ಕಾರದಿಂದ ಅನುದಾನ ದೊರೆಯದ ಕಾರಣ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.

ಕೈಗೂಡದ ಪ್ರಯತ್ನ

ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಗೋಶಾಲೆ ಆರಂಭಿಸುವ ಪ್ರಯತ್ನ ನಡೆದರೂ ಅದೂ ಕೈಗೂಡಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಗೋಶಾಲೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಖಾಸಗಿ ಟ್ರಸ್ಟ್ ಒಂದರ ಜತೆಗೆ ಸೇರಿ ನಡೆಸುವ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಇಲ್ಲಿನ ಸುತ್ತಲ ಗೋಮಾಳ ಪ್ರದೇಶದಲ್ಲಿ ಗೋವುಗಳಿಗಾಗಿ ಹುಲ್ಲು ಬೆಳೆಯುವ ಯೋಜನೆಯನ್ನೂ ರೂಪಿಸಲಾಗಿತ್ತು. ವಾರಸುದಾರರಿಲ್ಲದ ಬಿಡಾಡಿ ಜಾನುವಾರುಗಳು, ಅಶಕ್ತ ಗೋವುಗಳನ್ನು ಆದ್ಯತೆ ಮೇರೆಗೆ ಇಲ್ಲಿ ಆಶ್ರಯ ನೀಡಿ ಸಾಕಿ ಸಲಹುವ ಯೋಜನೆ ರೂಪಿಸಲಾಗಿತ್ತು. ಆದರೆ ಅದ್ಯಾವುದೂ ಕೈಗೂಡಲಿಲ್ಲ..!
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net