ಆವರ್ಸೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶೇಷಪ್ಪ ಮಡಿವಾಳ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಡಾ.ಮಾಧವ ಐತಾಳ್, ನೀಲಕಂಠ ಅಡಿಗ, ಸರಸ್ವತಿ, ಸುಧಾಕರ್, ಶೇಡಿಕೊಡ್ಲು ವಿಠಲ ಶೆಟ್ಟಿ, ಪ್ರತಿಭಾ, ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು.
ಹಸುಗಳನ್ನು ಮಾರಕ ಕಾಯಿಲೆಗಳಿಂದ ರಕ್ಷಿಸಲು ಹೈನುಗಾರರು ಕಾಲಕಾಲಕ್ಕೆ ವೈದ್ಯರ ಸಲಹೆ ಹಾಗೂ ತಪಾಸಣೆ ಮಾಡಿಸಿಕೊಳ್ಳಬೇಕು. ಹಸುಗಳಿಗೆ ಅಧಿಕ ಪೋಷಕಾಂಶಯುಕ್ತ ಆಹಾರ ಮತ್ತು ಮೇವು ನೀಡುವುದರಿಂದ ಹಾಲಿನ ಇಳುವರಿ ಹೆಚ್ಚುತ್ತದೆ. ಉತ್ತಮ ಗುಣಮಟ್ಟದ ಹಾಲು ನೀಡುವುದರಿಂದ ಹೈನುಗಾರರ ಆರ್ಥಿಕ ಅಭಿವೃದ್ಧಿ ಜತೆಗೆ ಸಂಘದ ಅಭಿವೃದ್ಧಿಯಾಗುತ್ತದೆ ಎಂದು ದ.ಕ. ಹಾಲು ಒಕ್ಕೂಟ ಮಂಗಳೂರು ಉಪವ್ಯವಸ್ಥಾಪಕ ಡಾ.ಮಾಧವ ಐತಾಳ್ ಹೇಳಿದರು.
ಸಂಘದ ವಠಾರದಲ್ಲಿ ಆವರ್ಸೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಸಂಘ 2025-26ನೇ ಸಾಲಿನಲ್ಲಿ 3,51,440 ಲಾಭಾಂಶ ಪಡೆದಿದ್ದು, ಎ ಶ್ರೇಣಿ ಪಡೆದಿದೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಘದಲ್ಲಿ 37 ವರ್ಷ ಸಿಇಒ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶೇಷಪ್ಪ ಮಡಿವಾಳ ದಂಪತಿಯನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ನೀಲಕಂಠ ಅಡಿಗ ಅಧ್ಯಕ್ಷತೆ ವಹಿಸಿದ್ದರು. ದ.ಕ. ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ಸರಸ್ವತಿ ಮಾತನಾಡಿದರು. ದ.ಕ. ಹಾಲು ಒಕ್ಕೂಟ ಮಂಗಳೂರು ಉಪ್ಪೂರು ಡೇರಿಯ ಮಾರುಕಟ್ಟೆ ವಿಭಾಗ ಉಪವ್ಯವಸ್ಥಾಪಕ ಸುಧಾಕರ್, ದ.ಕ. ಹಾಲು ಒಕ್ಕೂಟ ಮಂಗಳೂರು ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ವಿಸ್ತರಣಾಧಿಕಾರಿ ಪ್ರತಿಭಾ, ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಸಿಇಒ ಜಯಶೀಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಹಾಲು ಪರೀಕ್ಷಕ ಉಮೇಶ್ ಸ್ವಾಗತಿಸಿದರು. ಆಶ್ರಿತಾ ಪ್ರಾರ್ಥಿಸಿದರು. ಸಂಘದ ಸಿಇಒ ವರದಿ ವಾಚಿಸಿದರು. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರೈತ ಕಲ್ಯಾಣ ಟ್ರಸ್ಟ್‌ನಿಂದ ಅನುದಾನ
ಒಕ್ಕೂಟದಿಂದ ರಬ್ಬರ್ ಮ್ಯಾಟ್, ಗೋಬರ್ ಗ್ಯಾಸ್, ಹಸಿಹುಲ್ಲು ಬೆಳೆಸಲು ಅನುದಾನ, ಹುಲ್ಲು ಕಟಾವು ಮಾಡುವ ಯಂತ್ರಕ್ಕೆ ಸಹಾಯಧನ ನೀಡಲಾಗುವುದು. ರೈತ ಕಲ್ಯಾಣ ಟ್ರಸ್ಟ್‌ನಿಂದ ರೈತರಿಗೆ ಅನುದಾನ, ಮಿನಿ ಡೇರಿ, ವಾಣಿಜ್ಯ ಡೇರಿ, ಕರುಸಾಕಣೆ ಮುಂತಾದ ಯೋಜನೆಗಳು ಮತ್ತು ಅನುದಾನಗಳ ಕುರಿತು ದ.ಕ. ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ಸರಸ್ವತಿ ಮಾಹಿತಿ ನೀಡಿದರು.
ಸಂಘ ವರದಿ ವರ್ಷದಲ್ಲಿ ಎ ಗ್ರೇಡ್ ಹೊಂದಿದ್ದು, ಹೈನುಗಾರರಿಗೆ ಶೇ.65 ಬೋನಸ್ ನೀಡಲಾಗಿದೆ. ಶೇ.15 ಡಿವಿಡೆಂಡ್ ವಿತರಿಸಲಾಗಿದೆ. ಮುಂದಿನ ವರ್ಷದಲ್ಲಿ 850 ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಲಾಗಿದೆ.