

ಉಡುಪಿ: ಸಮುದ್ರ ತೀರದಲ್ಲಿ ಮತ್ತು ಸಮುದ್ರದಲ್ಲಿ ಕರ್ತವ್ಯ ನಿರ್ವಹಿಸುವ ಕರಾವಳಿ ಕಾವಲು ಪೊಲೀಸ್ ಘಟಕದ ಅಧಿಕಾರಿ, ಸಿಬ್ಬಂದಿಗೆ ನೀಡಿರುವ ತರಬೇತಿ ಅತ್ಯಂತ ಉಪಯುಕ್ತವಾಗಿದೆ. ಇದು ಕರ್ತವ್ಯ ನಿರ್ವಹಣೆಯಲ್ಲಿ ಇನ್ನಷ್ಟು ಕಾರ್ಯ ಕ್ಷಮತೆ ಲಭಿಸಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಮಣಿಪಾಲ ಮಾಹೆ ಸಹಕಾರ ಪ್ರಶಂಸನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಮಣಿಪಾಲದ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನ ಸಭಾಂಗಣದಲ್ಲಿ ಮಾಹೆ ವತಿಯಿಂದ ವರ್ಲ್ಡ್ ಮೆರಿಟೈಮ್ ಡೇ-2026ರ ನಿಮಿತ್ತ ಕರಾವಳಿ ಕಾವಲು ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗೆ ಗುರುವಾರ (ಸೆ.24) ಆಯೋಜಿಸಿದ್ದ ಜಲರಕ್ಷಣೆ ಮತ್ತು ಪುನರುಜ್ಜೀವನ ಪ್ರಮಾಣಪತ್ರ ಕೋರ್ಸ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಲಾಖೆಗೆ ಸದಾ ಸಹಕಾರ
ಮಾಹೆಯ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಈ ತರಬೇತಿಯು ಜನರ ಜೀವರಕ್ಷಣೆ ಮಾಡಲು ಪೊಲೀಸ್ ಇಲಾಖೆಗೆ ಅತ್ಯಂತ ಉಪಯುಕ್ತವಾಗಿದೆ. ಪೊಲೀಸ್ ಇಲಾಖೆ ಮತ್ತು ಮಣಿಪಾಲ ಮಾಹೆ ಸಂಸ್ಥೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಮುಂದೆಯೂ ಸಹ ಇಲಾಖೆಯ ಚಟುವಟಿಕೆಗಳಿಗೆ ಸದಾ ಸಹಕಾರ ನೀಡಲಾಗುವುದು ಎಂದರು.
ಮಾಹೆಯ ಚೀಪ್ ಅಪರೇಟಿಂಗ್ ಆಫೀಸರ್ ಡಾ.ಆನಂದ್ ವೇಣುಗೋಪಾಲ್, ಕೆಎಂಸಿ ಡೀನ್ ಡಾ.ಅನಿಲ್ ಕೆ. ಭಟ್, ಡಿರ್ಪಾಟ್ಮೆಂಟ್ ಅಫ್ ಎರ್ಮಜೆನ್ಸಿ ಮೆಡಿಸಿನ್ನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಸಿಡಬ್ಲ್ಯುಎಂ ಕೋ-ಆರ್ಡಿನೇಟರ್ ಡಾ.ಪ್ರಾಸ್ಟ್ಯನ್ ಮರೆ ಶಿರೂರು ಉಪಸ್ಥಿತರಿದ್ದರು.
ತರಬೇತಿ ಪಡೆದ 42 ಸಿಬ್ಬಂದಿಗೆ ಮಣಿಪಾಲ ಮಾಹೆ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು. ಉಪನ್ಯಾಸಕಿ ಶ್ವೇತಾ ಕುಲಾಲ್ ತರಬೇತಿ ನೀಡಿದ್ದು, ಕಾರ್ಯಕ್ರಮ ನಿರ್ವಹಿಸಿದರು.