ಪೆರ್ಡೂರು ದೇವಸ್ಥಾನ ಜೀರ್ಣೋದ್ಧಾರ ಬಗ್ಗೆ ಸೊರಕೆ ಹೇಳಿಕೆ ಸತ್ಯಕ್ಕೆ ದೂರ : ಸುರೇಶ್ ಶೇರ್ವೆಗಾರ್

ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
Published on
ಉಡುಪಿ : ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕರ ಬೆಂಬಲಿಗರು ಹೈಕೋರ್ಟಿನಿಂದ ತಡೆ ತಂದಿದ್ದಾರೆ ಎಂಬ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ಜೀರ್ಣೋದ್ಧಾರ ಸಮಿತಿಯನ್ನು ಸಕಾರಣವಿಲ್ಲದೆ ಬರಕಾಸ್ತು ಮಾಡುವ ಮೂಲಕ ದೇವಸ್ಥಾನದ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಸುರೇಶ್ ಶೇರ್ವೆಗಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಅಭಿವೃದ್ಧಿಯ ಹಾದಿಯಲ್ಲಿ ಕಾಂಗ್ರೆಸ್ ಮುಖಂಡರು ಅನೇಕ ಬಾರಿ ಅಡ್ಡಿಪಡಿಸಿದ್ದಾರೆ.
ಹಿಂದಿನ ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣದ್ದಾರ ಸಮಿತಿ ವತಿಯಿಂದ ಸುಮಾರು 30 ರಿಂದ 50 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರದ ಯೋಜನೆ ಹಾಕಿಕೊಳ್ಳಲಾಗಿತ್ತು. ಯೋಜನೆಗೆ ಬೇಕಾದ ಪ್ರಾಥಮಿಕ ಸಿದ್ಧತೆಗಾಗಿ ಸಮಿತಿಯು ಸ್ವತಃ 10 ಲಕ್ಷ ರೂ. ಖರ್ಚು ಮಾಡಿದೆ. ಗ್ರಾಮಸ್ಥರ ಸಭೆಯಲ್ಲಿ ಭಕ್ತರು ಸುಮಾರು 3 ಕೋಟಿ ರೂ. ದೇಣಿಗೆ ನೀಡುವ ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಮೂರು ವರ್ಷದ ಅವಧಿಗೆ ಆಯ್ಕೆಯಾಗಿದ್ದ ಜೀರ್ಣದ್ದಾರ ಸಮಿತಿಯನ್ನು ರದ್ದು ಪಡಿಸಿದರು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು. ಎರಡು ವರ್ಷಗಳ ವಿಚಾರಣೆ ನಂತರ ಜನವರಿ 4ರಂದು ನಮ್ಮ ಸಮಿತಿ 3 ವರ್ಷದ ಅವಧಿ ಮುಗಿದ ಕಾರಣ ಹೈಕೋರ್ಟು ಅರ್ಜಿಯನ್ನು ವಜಾಗೊಳಿಸಿದೆ. ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಸಮಿತಿಯನ್ನು ರದ್ದು ಪಡಿಸಿದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂಬುದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನ್ಯಾಯಾಲಯ ಯಥಾ ಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದರು ಕೂಡ ಜೀರ್ಣೋದ್ಧಾರ ಸಮಿತಿಯ ಗಮನಕ್ಕೆ ತಾರದೆ ಜಿಲ್ಲಾಧಿಕಾರಿಗಳಿಗೆ ಗೋಪುರ ಬಿದ್ದು ಹೋಗುವ ಸ್ಥಿತಿಯಲ್ಲಿದೆ ಎಂಬ ಸುಳ್ಳು ಮಾಹಿತಿ ನೀಡಿ ತೆರವುಗೊಳಿಸಲು ಅನುಮತಿ ಪಡೆಯಲಾಗಿದೆ. ನವೀಕರಣ ಮಾಡುವ ಬದಲು ಕೇವಲ ಒಂದು ಗೋಪುರ ನಿರ್ಮಾಣಕ್ಕೆ ಮುಂದಾಗಿರುವುದು ರಾಜಕೀಯ ಗಿಮಿಕ್ ಆಗಿದೆ. ನಾವು ದೇವಸ್ಥಾನದ ಅಭಿವೃದ್ಧಿಯನ್ನು ಎಂದಿಗೂ ತಡೆದಿಲ್ಲ. ಆದರೆ ರಾಜಕೀಯಕ್ಕಾಗಿ ದೇವಸ್ಥಾನವನ್ನು ಬಳಸಿಕೊಳ್ಳಬಾರದು. ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.
ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಜಿ ಎನ್ ಆರ್ ಹೆಗ್ಡೆ, ದೇವು ಪೂಜಾರಿ, ಸುಧಾಕರ ಶೆಟ್ಟಿ, ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net