ಉಜಿರೆ ದೇವಳಕ್ಕೆ ಪೇಜಾವರ ಶ್ರೀ ಭೇಟಿ

ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಪೇಜಾವರ ಶ್ರೀಗಳು ಭೆೇಟಿ ನೀಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಪೇಜಾವರ ಶ್ರೀಗಳು ಭೆೇಟಿ ನೀಡಿದರು.
Published on
ಬೆಳ್ತಂಗಡಿ: ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಶ್ರೀಗಳನ್ನು ಸ್ವಾಗತಿಸಿದರು.
ನೂತನ ವಿಜಯಗೋಪುರ, ಶಾರದಾ ಮಂಟಪದಲ್ಲಿ ಸಮೃದ್ಧಿ ಹಸಿರುಹೊರೆ ಕಾಣಿಕೆಯ ದಾಸ್ತಾನು ಮಳಿಗೆ, ಸುಪ್ರಸಾದ ಭೋಜನ ಶಾಲೆಯನ್ನು ವೀಕ್ಷಿಸಿದ ಶ್ರೀಗಳು, ಕ್ಷೇತ್ರದ ಪರಿಪೂರ್ಣ ನವೀಕರಣ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಕ್ಷೇತ್ರದ ತಂತ್ರಿ ನೀಲೇಶ್ವರ ಆಲಂಬಾಡಿ ಮಾಧವ ತಂತ್ರಿ, ಪದ್ಮನಾಭ ತಂತ್ರಿ ಹಾಗೂ ವೈದಿಕ ತಂಡವನ್ನು ಶರತ್‌ಕೃಷ್ಣ ಪಡುವೆಟ್ನಾಯ, ಬ್ರಹ್ಮ ಕಲಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಕ್ಷೇತ್ರದ ಮಹಾದ್ವಾರದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ರಾಮಕೃಷ್ಣ ಕಲ್ಲೂರಾಯ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪಶುದಾನ, ಪುಣ್ಯಾಹ, ಅಂಕುರಾರೋಪಣ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ರಾತ್ರಿ ಪೂಜೆ ಹಾಗೂ ನೂತನ ವಿಜಯಗೋಪುರ ಶುದ್ಧಿ ಕ್ರಿಯೆ ನೆರವೇರಿತು.
ಚಂದ್ರಗ್ರಹಣ ಪ್ರಯುಕ್ತ ವಿಶೇಷ ಪೂಜೆ: ಚಂದ್ರಗ್ರಹಣ ಪ್ರಯುಕ್ತ ಕ್ಷೇತ್ರದ ಶ್ರೀ ಮಂಜುಳೇಶ ಸನ್ನಿಧಿಯಲ್ಲಿ ಬೆಳಗ್ಗೆ ವಿಶೇಷ ಶತರುದ್ರಾಭಿಷೇಕ, ಮಧ್ಯಾಹ್ನ ಗ್ರಹಣ ಕಾಲದಲ್ಲಿ ಬೆಳ್ತಂಗಡಿ ತಾಲೂಕಿನ ವಿಪ್ರ ಸಮಾಜದವರಿಂದ ಸಾಮೂಹಿಕ ರುದ್ರಾಧ್ಯಾಯ ಪಾರಾಯಣ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ಉಜಿರೆಯ ಯಕ್ಷಬಿಂದು ಕಲಾರಾಧನಾ ಪ್ರತಿಷ್ಠಾನ ವತಿಯಿಂದ ಅರುಣಕುಮಾರ್ ಧರ್ಮಸ್ಥಳ ಸಂಯೋಜನೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಉದಯಾಸ್ತಮಾನ ನಿರಂತರ ಭಜನಾ ಸೇವೆಗೆ ಚಾಲನೆ

ಬ್ರಹ್ಮಕಲಶೋತ್ಸವ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ಸುಮಾರು 61 ಭಜನಾ ತಂಡಗಳಿಂದ ಭಜನಾಮೃತ ನಿರಂತರ ಭಜನಾ ಸೇವೆ ನಡೆಯಲಿದ್ದು, ಬುಧವಾರ ಬೆಳಗ್ಗೆ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು. ಮಾ11ರವರೆಗೆ ಪ್ರತಿ ದಿನ ಬೆಳಗ್ಗೆ 6.30ರಿಂದ ಸಂಜೆ 6.30ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ. ಪ್ರೊ.ಪ್ರಕಾಶ್ ಪ್ರಭು ಮತ್ತು ಮಂಜುನಾಥ್ ಶೆಟ್ಟಿ ನಿಡಿಗಳ್ ನೇತೃತ್ವದಲ್ಲಿ ತಾಲೂಕಿನ ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net