ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ಶಿಲಾ ಪೂಜೆಯ ಧಾರ್ಮಿಕ ಸಭೆಯಲ್ಲಿ ಪ್ರಮುಖರಾದ ಬಾಳೆಕುದ್ರು ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮೀಜಿ, ರಾಜೇಶ್ ಹೆಬ್ಬಾರ್, ಗುರುರಾಜ್ ಗಂಟಿಹೊಳೆ, ಗೋಪಾಲ ಪೂಜಾರಿ ಮೊದಲಾದವರು ಇದ್ದರು.
ಕುಂದಾಪುರ: ದೇವಾಲಯ, ಮಠಗಳಂಥ ಪವಿತ್ರ ಸ್ಥಳಗಳು ಭಕ್ತರಿಗೆ ನೆಮ್ಮದಿ ಜತೆಗೆ ಭಕ್ತಿ ಭಾವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಮರವಂತೆ ಸಮುದ್ರ ತಟದಲ್ಲಿರುವ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಇದಕ್ಕೆ ಉತ್ತಮ ಉದಾಹರಣೆ ಎಂದು ಶ್ರೀಮಠ ಬಾಳೆಕುದ್ರು ಶ್ರೀಮದ್ ಜಗದ್ಗುರು ಆದಿ ಶಂಕರಾಚಾರ್ಯ ಮಹಾಸಂಸ್ಥಾನಮ್, ಶ್ರೀ ವಾಗೀಶ್ವರಿ ಲಕ್ಷ್ಮೀನರಸಿಂಹ ಭಾಗವತ ಮಹಾಪೀಠದ ಶ್ರೀ ವಾಸುದೇವ ಸದಾಶಿವಾಶ್ರಮ ಮಹಾಸ್ವಾಮೀಜಿ ಹೇಳಿದರು.
ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ನಿರ್ಮಾಣದ ಶಿಲಾ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮರವಂತೆ ಶ್ರೀ ವರಾಹ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಹೆಬ್ಬಾರ್ ಮಾತನಾಡಿದರು. ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಗೋಪಾಲ ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ದಯಾನಂದ ಬಳೆಗಾರ, ಅಧ್ಯಕ್ಷ ರಾಜಶೇಖರ್ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿದರು. ಕರುಣಾಕರ ಆಚಾರ್ಯ ಮರವಂತೆ ನಿರೂಪಿಸಿದರು. ರವಿ ದೇವಾಡಿಗ ವಂದಿಸಿದರು.
ಭಾನುವಾರ ಬೆಳಗ್ಗೆ ಗಣಪತಿ ಹವನ ಮತ್ತು ಶ್ರೀ ವರಾಹ, ಶ್ರೀ ವಿಷ್ಣು, ಶ್ರೀ ನರಸಿಂಹ ದೇವರಿಗೆ ಪುಷ್ಪಲಂಕಾರ ಪೂಜೆ, ಶ್ರೀ ಗಂಗಾಧರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಅಲಂಕಾರ ಪೂಜೆ, ಶಿಲಾ ಮೆರವಣಿಗೆ, ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು.
2,500 ವರ್ಷಗಳ ಇತಿಹಾಸ ಹೊಂದಿರುವ ಮರವಂತೆ ದೇಗುಲದ ಅಭಿವೃದ್ಧಿ ದೇವರ ಕೃಪೆ ಹಾಗೂ ಭಕ್ತರ ಸಹಕಾರದಿಂದ ಸಾಧ್ಯವಾಗಲಿದೆ. ಜೀರ್ಣೋದ್ಧಾರ ಕಾರ್ಯ ಎಷ್ಟು ಮುಖ್ಯವೋ, ಅದರ ಬಳಿಕ ದೇವಾಲಯವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುವುದು ಅಷ್ಟೇ ಮಹತ್ವದ್ದು. ದೇವಾಲಯದಲ್ಲಿ ನಿತ್ಯ ಪೂಜೆ, ಪುನಸ್ಕಾರ, ನೈವೇದ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳು ಕಾಲಕಾಲಕ್ಕೆ ನಿರಂತರವಾಗಿ ನಡೆಯಬೇಕು.
— ರಾಜೇಶ್ ಹೆಬ್ಬಾರ್, ಅಧ್ಯಕ್ಷ, ಮರವಂತೆ ಶ್ರೀ ವರಾಹ ದೇವಸ್ಥಾನ ವ್ಯವಸ್ಥಾಪನಾ ಸಮಿತಿ