ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ

ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಡಾ. ಬಸವರಾಜ್​ ಹುಬ್ಬಳ್ಳಿ, ಡಾ. ಶ್ರೀರಾಮ್​ ರಾವ್​ ಕೆ., ಡಾ. ಪ್ರಶಾಂತ ಭಟ್​, ಸುಬ್ರಹ್ಮಣ್ಯ ಇತರಿದ್ದರು.
ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಡಾ. ಬಸವರಾಜ್​ ಹುಬ್ಬಳ್ಳಿ, ಡಾ. ಶ್ರೀರಾಮ್​ ರಾವ್​ ಕೆ., ಡಾ. ಪ್ರಶಾಂತ ಭಟ್​, ಸುಬ್ರಹ್ಮಣ್ಯ ಇತರಿದ್ದರು.
Published on

* ಸ್ಕ್ಯಾನಿಂಗ್​ ಸೆಂಟರ್​ಗಳಿಗೆ ಡಿಸಿ ಸ್ವರೂಪಾ ಎಚ್ಚರಿಕೆ

* ಪಿಸಿಪಿಎನ್​ಡಿಟಿ ಜಿಲ್ಲಾ ಸಕ್ಷಮ ಪ್ರಾಧಿಕಾರ ಸಮಿತಿ ಸಭೆ

ಉಡುಪಿ: ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಹಾಗೂ ನಿಯಂತ್ರಣದ ಉದ್ದೇಶದಿಂದ ಸರ್ಕಾರ ಪಿಸಿಪಿಎನ್​ಡಿಟಿ ಕಾಯಿದೆ ಜಾರಿಗೆ ತಂದಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ಸ್ಕ್ಯಾನಿಂಗ್​ ಅಥವಾ ಅಲ್ಟ್ರಾಸೌಂಡ್​ ಸ್ಕ್ಯಾನಿಂಗ್ ಸೆಂಟರ್​ಗಳಿಗೆ ಅನುಮತಿ ನೀಡುವಾಗ ಸರ್ಕಾರದ ನಿಯಮ ಪಾಲನೆ ಮಾಡಿದ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ (ಮೇ 12) ಆಯೋಜಿಸಿದ್ದ ಪಿಸಿಪಿಎನ್​ಡಿಟಿ ಜಿಲ್ಲಾ ಮಟ್ಟದ ಸಕ್ಷಮ ಪ್ರಾಧಿಕಾರ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಮತ್ತು ಕುಂದು-ಕೊರತೆ ನಿವಾರಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.

ಕಾನೂನು ಕ್ರಮ ಕೈಗೊಳ್ಳಿ

ಸ್ಕ್ಯಾನಿಂಗ್​ ಸೆಂಟರ್​ಗಳಲ್ಲಿ ಕರ್ತವ್ಯ ನಿರ್ವಹಿಸುವ ರೇಡಿಯಾಲಜಿಸ್ಟ್​ ವೈದ್ಯರುಗಳ ವಿವರ ಪ್ರದರ್ಶಿಸಬೇಕು. ಅಲ್ಲದೆ, ಸರ್ಕಾರದಿಂದ ಪಡೆದ ಅನುಮತಿ ಪತ್ರವನ್ನೂ ಕಡ್ಡಾಯವಾಗಿ ಪ್ರದರ್ಶಿಸಬೇಕು. ನಿಯಮಾನುಸಾರ ರಿಜಿಸ್ಟರ್​ಗಳ ನಿರ್ವಹಣೆ ವ್ಯವಸ್ಥಿತವಾಗಿ ಮಾಡಬೇಕು. ಯಂತ್ರಗಳ ಬದಲಾವಣೆ ಅಥವಾ ಬೇರೆ ರೇಡಿಯಾಲಜಿಸ್ಟ್​ ವೈದ್ಯರ ನೇಮಕ ಮಾಡುವಾಗ ಜಿಲ್ಲಾ ಮಟ್ಟದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಶಿಕ್ಷಾರ್ಹ ಅಪರಾಧ

ರೋಗಿಗಳು ತಪಾಸಣೆಗಾಗಿ ಕೇಂದ್ರಗಳಿಗೆ ಬಂದಾಗ ವೈದ್ಯರ ಆಯ್ಕೆ ಮಾಡಲು ಅನುಕೂಲ ಮಾಡಿಕೊಡಬೇಕು. ಗಂಟೆಗಟ್ಟಲೇ ಕಾಯಿಸದೆ ಸಕಾಲಕ್ಕೆ ಸೇವೆ ಒದಗಿಸಬೇಕು. ಭ್ರೂಣಲಿಂಗ ಪತ್ತೆ ಹಚ್ಚುವುದು, ಭ್ರೂಣ ಹತ್ಯೆ ಮಾಡುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಜಿಲ್ಲಾ ಮಟ್ಟದ ಸಮಿತಿಗಳು ಎಚ್ಚರ ವಹಿಸಬೇಕು. ಒಂದೊಮ್ಮೆ ಕಾಯಿದೆ ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 1 ಸಾವಿರ ಗಂಡು ಮಕ್ಕಳಿಗೆ 983 ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಲಿಂಗಾನುಪಾತ ಕಡಿಮೆಯಾದರೆ ಆಗುವ ಸಾಮಾಜಿಕ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ್​ ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ್​ ರಾವ್​ ಕೆ., ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ ಭಟ್​, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ನಗರಸಭಾ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ಸಂಸ್ಥೆಗಳಿಗೆ ಒಟ್ಟು 415 ನೋಟಿಸ್​

ತಾಲೂಕು ಪ್ರಾಧಿಕೃತ ಅಧಿಕಾರಿಗಳ ಪರಿಶೀಲನಾ ಸಮಿತಿಯು 2025ರ ಸೆಪ್ಟಂಬರ್​ನಿಂದ 2026ರ ಏಪ್ರಿಲ್​ ವರೆಗೆ ಉಡುಪಿಯ 120, ಕುಂದಾಪುರದ 94 ಹಾಗೂ ಕಾರ್ಕಳದ 120 ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಈ ಸಂದರ್ಭದಲ್ಲಿ ಅಗ್ನಿ ನಿರೋಧಕ ಸಾಧನ ಇಲ್ಲದಿರುವ ಬಗ್ಗೆ ಹಾಗೂ ಕೆಲವು ನಿಯಮಾವಳಿ ಪಾಲಿಸದ ಕಾರಣ ವಿವಿಧ ಸಂಸ್ಥೆಗಳಿಗೆ ಕ್ರಮವಾಗಿ 102, 248 ಹಾಗೂ 65 ಸೇರಿ ಒಟ್ಟು 415 ನೋಟೀಸ್​ ನೀಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
"

ಪಿಸಿಪಿಎನ್​ಡಿಟಿ ಜಿಲ್ಲಾ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಸದಸ್ಯರು ಮೂರು ತಿಂಗಳ ಒಳಗಾಗಿ ಜಿಲ್ಲೆಯ ಎಲ್ಲ ನೋಂದಾಯಿತ ಸ್ಕ್ಯಾನಿಂಗ್​ ಸೆಂಟರ್​, ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಕಾಯಿದೆಯ ಅನುಷ್ಠಾನದಲ್ಲಿ ಯಾವುದೇ ನ್ಯೂನತೆ ಇದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net