ಬಂಟ್ವಾಳ: ಬಿ.ಸಿ.ರೋಡಿನ ಕೆಎಸ್‌ಆರ್‌ಟಿ.ಸಿ ಬಸ್ ನಿಲ್ದಾಣದ ಒಳಗೆ ಖಾಸಗಿ ನಿರ್ವಹಣೆಯಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಂಡಿದ್ದು, ಇಲ್ಲಿ ದ್ವಿಚಕ್ರ ವಾಹನಗಳಿಗೆ 4 ಗಂಟೆಗೆ 5 ರೂ., ಅವಧಿ ಹೆಚ್ಚಾದರೆ ಅಥವಾ ಒಂದು ದಿನವಾದರೆ 10 ರೂ., ನಾಲ್ಕು ಚಕ್ರದ ವಾಹನಗಳಿಗೆ 4 ಗಂಟೆಗೆ 10 ರೂ. ಹೆಚ್ಚು ಅವಧಿ ಅಥವಾ ಒಂದು ದಿನಕ್ಕೆ 20 ರೂ. ಶುಲ್ಕ ನಿಗದಿಪಡಿಸಲಾಗಿದೆ.
2017ರಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಾರ್ವಜನಿಕ ಬಳಕೆಯಿಂದ ಸ್ವಲ್ಪ ದೂರ ಉಳಿದ ಕಾರಣ ಬಸ್ ನಿಲ್ದಾಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನವಿತ್ತು. ಸರ್ಕಾರಿ ಬಸ್‌ಗಳು ಕೇವಲ ಟಿ.ಸಿ. ಎಂಟ್ರಿಗಷ್ಟೇ ನಿಲ್ದಾಣ ಪ್ರವೇಶಿಸುತ್ತಿದ್ದು, ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಿರಲಿಲ್ಲ. ಸದ್ಯಕ್ಕೆ ಬಸ್ ನಿಲ್ದಾಣದ ತಳ ಅಂತಸ್ತಿನಲ್ಲಿ ಪೇ ಪಾರ್ಕಿಂಗ್ ಸೌಲಭ್ಯ ಆರಂಭಗೊಂಡಿದ್ದು, ಪಾರ್ಕಿಂಗ್ ಸಮಸ್ಯೆಯಿಂದ ಪರಿತಪಿಸುತ್ತಿದ್ದ ನಗರದ ಹೊರೆ ಸ್ವಲ್ಪ ಇಳಿದಂತಾಗಿದೆ.
ಸ್ಥಳವಾಕಾಶ ಇರುವಲ್ಲಿಯೆಲ್ಲಾ ವಾಹನ ನಿಲ್ಲಿಸಿ, ಸಂಜೆ ವಾಹನ ವಾಪಸ್ ತೆಗೆಯಲು ಪರದಾಡುವವರಿಗೆ ಅನುಕೂಲವಾಗಲಿದೆ. ಬಿ.ಸಿ.ರೋಡ್ ಪೇಟೆಗೆ ನಾನಾ ಕೆಲಸ ಕಾರ್ಯಗಳಿಗೆ ಆಗಮಿಸುವವರು ಬಸ್ ನಿಲ್ದಾಣದ ಪಾರ್ಕಿಂಗ್ ವ್ಯವಸ್ಥೆ ಬಳಸಿಕೊಳ್ಳಬಹುದು. ಸಿಸಿ ಟಿವಿ ಕಣ್ಗಾವಲೂ ಇದಕ್ಕಿದ್ದು, ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಂಡು ರಾತ್ರಿ 10ರವರೆಗೆ ಇರುತ್ತದೆ.
ಅನುಷ್ಠಾನಗೊಳ್ಳದ ಪುರಸಭೆ ಪಾರ್ಕಿಂಗ್
ಪುರಸಭೆಯ ಹೆಚ್ಚಿನ ಸಾಮಾನ್ಯ ಸಭೆಗಳಲ್ಲಿ ಬಿ.ಸಿ.ರೋಡಿನ ಪಾರ್ಕಿಂಗ್ ವಿಚಾರ ಚರ್ಚೆಯಾಗುತ್ತಿತ್ತು. ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿ ಪೇ ಪಾರ್ಕಿಂಗ್ ಮಾಡುವ ಚಿಂತನೆ ನಡೆಸಲಾಗಿತ್ತು. ಆದರೆ ಚರ್ಚೆ ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪೇ ಪಾರ್ಕಿಂಗ್ ಆರಂಭಗೊಂಡಿರುವುದರಿಂದ ಬಿ.ಸಿ.ರೋಡಿನಲ್ಲಿ ಅಡ್ಡದಿಡ್ಡಿ ಪಾರ್ಕಿಂಗ್ ಮಾಡುವ ಸಮಸ್ಯೆಗೆ ಇನ್ನಾದರೂ ಕಡಿವಾಣ ಬೀಳಬಹುದೇ ಎಂದು ಇಲ್ಲಿನ ನಾಗರಿಕರು ಕಾಯುತ್ತಿದ್ದಾರೆ.
ಕೇಂದ್ರ ಕಚೇರಿ ಅನುಮತಿಯೊಂದಿಗೆ ಟೆಂಡರ್ ಕರೆದು ಗುತ್ತಿಗೆ ಸಂಸ್ಥೆ ವ್ಯವಸ್ಥೆ ನಿಭಾಯಿಸುತ್ತಿದೆ. ಆರಂಭದಲ್ಲೇ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಬಿ.ಸಿ.ರೋಡಿನ ವಾಹನದಟ್ಟಣೆಗೆ ಪರಿಹಾರ ದೊರಕಲು ಸಹಕಾರಿಯಾಗಬಹುದು.