ಪರಶುರಾಮ ಥೀಂ ಪಾರ್ಕ್ ಸ್ವಚ್ಛತಾ ಕಾರ್ಯ

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದು.
Published on
ಕಾರ್ಕಳ: ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಲ್ಲಿ ಬೈಲೂರು ಉಮಿಕಲ್ಲು ಬೆಟ್ಟದಲ್ಲಿ ನಿರ್ಮಿಸಲಾದ ಪರಶುರಾಮ ಥೀಂ ಪಾರ್ಕ್ ಬಳಿಕ ರಾಜಕೀಯ ಮೇಲಾಟಕ್ಕೆ ಬಲಿಯಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ನಿರ್ವಹಣೆಯಿಲ್ಲದೆ ಥೀಂ ಪಾರ್ಕ್ ಆವರಣದಲ್ಲಿ ಹುಲ್ಲು, ಪೊದೆಗಳು ತುಂಬಿ ಥೀಮ್ ಪಾರ್ಕ್ ಪಾಳುಬಿದ್ದ ಸ್ಥಿತಿ ನಿರ್ಮಾಣವಾಗಿದ್ದು, ಇತ್ತೀಚೆಗೆ ಕಳ್ಳತನವೂ ನಡೆದು ಸುದ್ದಿಯಾಗಿತ್ತು. ಇದೀಗ ಥೀಮ್ ಪಾರ್ಕ್ ಸ್ವಚ್ಛತಾ ಕಾರ್ಯಕ್ಕೆ ಜಿಲ್ಲಾಧಿಕಾರಿ ಆದೇಶಿದ್ದಾರೆ.
ಕಳವು ಘಟನೆ ಬೆನ್ನಲ್ಲೇ ಥೀಮ್ ಪಾರ್ಕ್‌ಗೆ ಭೇಟಿ ನೀಡಿದ್ದ ಶಾಸಕ ಸುನೀಲ್ ಕುಮಾರ್ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಜಿಲ್ಲಾಡಳಿತ ಪಾರ್ಕ್ ಸ್ವಚ್ಛಗೊಳಿಸದಿದ್ದಲ್ಲಿ ಜ.11ರಂದು ಕಾರ್ಯಕರ್ತರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ಮಕರ ಸಂಕ್ರಾಂತಿ ನಂತರ ಒಂದು ತಿಂಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ನಡೆಸುವುದಾಗಿ ತಿಳಿಸಿದ್ದರು. ಇದೀಗ ಜಿಲ್ಲಾಡಳಿತವೇ 20 ಮಂದಿ ಪೊಲೀಸರ ಉಪಸ್ಥಿತಿಯಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದೆ.
ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಂಡು ಇನ್ನೂ ಹಸ್ತಾಂತರವಾಗದ ಕಾರಣ, ಅಲ್ಲಿನ ಬೆಲೆಬಾಳುವ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸಾಮಗ್ರಿಗಳನ್ನು ರಕ್ಷಿಸುವ ಹೊಣೆಗಾರಿಕೆ ಅನುಷ್ಠಾನ ಸಂಸ್ಥೆಯಾದ ನಿರ್ಮಿತಿ ಕೇಂದ್ದದ್ದಾಗಿದೆ ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.
ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಯಾರಾದರೂ ಅತಿಕ್ರಮಣ ಪ್ರವೇಶ ಮಾಡಿದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ. ಆವರಣದ ಪೊದೆಗಳನ್ನು ತಕ್ಷಣ ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಕೈಗೊಂಡ ಕ್ರಮಗಳ ಬಗ್ಗೆ ಜ.10ರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು. ಅಲ್ಲದೆ, ಪ್ರತಿ ವಾರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ ಫೋಟೋದೊಂದಿಗೆ ವರದಿ ನೀಡಲು ಆದೇಶದಲ್ಲಿ ಡಿಸಿ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಸ್ತಾಪ

ಥೀಂ ಪಾರ್ಕ್ ಪಾಳು ಬಿದ್ದ ಸ್ಥಿತಿಯನ್ನು ಕಂಡು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಜ.14ರಿಂದ ಒಂದು ತಿಂಗಳ ಕಾಲ ಪಾರ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net