ಉಡುಪಿ: ನಮ್ಮೊಳಗಿನ ಏಕಾಂಗಿತನ, ನಿರಾಶೆ, ಅವಮಾನ, ಸಮಾಧಾನ, ಸಂತೋಷ ಸಹಿತ ಮನದ ಭಾವನೆಗಳ ಅಭಿವ್ಯಕ್ತಿಗೆ ಸಾಹಿತ್ಯ ಮಾಧ್ಯಮವಾಗಿದೆ. ಮರಗಳು, ಹಕ್ಕಿ, ಪ್ರಕೃತಿ ಮನುಷ್ಯನ ಶಕ್ತಿಗೆ ಮಿತಿ ಗುರುತಿಸುವ ರೂಪಕಗಳಾಗಿವೆ ಎಂದು ಕವಿ, ಕಥೆಗಾರ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಹೇಳಿದರು.
ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ರವೀಂದ್ರ ಮಂಟಪದ ಸಭಾಂಗಣದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ವತಿಯಿಂದ ನೀಡಲ್ಪಟ್ಟ ಪ್ರೊ. ಎಸ್.ವಿ ಪರಮೇಶ್ವರ ಭಟ್ಟ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕವಿತೆಗಳು, ಬರವಣಿಗಳು ಕನ್ನಡ ನಾಡಿಗೆ ತಲುಪುತ್ತದೆ ಎಂಬ ಕಲ್ಪನೆ ಪ್ರಾರಂಭದಲ್ಲಿ ಇರಲಿಲ್ಲ. ಸ್ನೇಹಿತರು, ಪರಿಚಿತರು ಓದಿದರೆ ಅಷ್ಟೇ ಸಂತೋಷವಾಗುತ್ತಿತ್ತು. ಆದರೆ ಹಳ್ಳಿಯ ಅನಾಮಿಕ ಹಕ್ಕಿಯನ್ನು ಜನ ಗುರುತಿಸಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಬಿ.ಎ. ವಿವೇಕ ರೈ, ಮೌಲ್ಯಗಳು ಮತ್ತು ಕೌಟುಂಬಿಕ ಸಂಬಂಧಗಳು ಉಳಿಯಬೇಕು. ಕವಿಗೆ ಕವಿ ಮುನಿಯುವ ಬದಲು ಮಣಿಯುವ ಸಂಸತಿ ಬೆಳೆಯಬೇಕು. ಸಂಕೇತಾಕ್ಷರಗಳ ಸಂಬಂಧಗಳಿಗೆ ಹೆಚ್ಚಿನ ಬಾಳಿಕೆ ಇಲ್ಲ. ಆಧುನಿಕತೆ ಬೇಸತ್ತವರು ಕಲೆ ಮತ್ತು ಸಂಸತಿಯತ್ತ ಒಲವು ತೋರುತ್ತಿದ್ದಾರೆ ಎಂದರು.
ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಸಾಹಿತಿ ಡಾ. ನಾ ದಾಮೋದರ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಪ್ರೊ. ಎಸ್. ವಿ ಪರಮೇಶ್ವರ ಭಟ್ಟರ ಪುತ್ರ ಎಸ್.ಪಿ ರಾಮಚಂದ್ರ, ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಉಪಸ್ಥಿತರಿದ್ದರು. ಡಾ. ಆರ್. ನರಸಿಂಹ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಡಾ. ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಗಾಯಕ ಕೆ.ಆರ್. ರಾಘವೇಂದ್ರ ಆಚಾರ್ಯ ಅವರಿಂದ ಎಸ್.ವಿ.ಪರಮೇಶ್ವರ ಭಟ್ಟ ಹಾಗೂ ಸುಬ್ರಾಯ ಚೊಕ್ಕಾಡಿ ಅವರ ಕವನಗಳ ಗಾಯನ ನಡೆಯಿತು.