ಪಾಪನಾಶಿನಿ ನದಿಯಲ್ಲಿ ಹೂಳು ತುಂಬಿ ನೆರೆ ಭೀತಿ

 ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಭದ್ರಮ ಸೇತುವೆ ಸಮೀಪ ನದಿಯಲ್ಲಿ ಹೂಳು ತುಂಬಿರುವುದು.
ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಭದ್ರಮ ಸೇತುವೆ ಸಮೀಪ ನದಿಯಲ್ಲಿ ಹೂಳು ತುಂಬಿರುವುದು.
Published on
ಹರಿಪ್ರಸಾದ್ ನಂದಳಿಕೆ ಶಿರ್ವ
ಕರಾವಳಿಯಲ್ಲಿ ಮುಂಗಾರು ಮಳೆ ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ಇತ್ತ ಬಂಟಕಲ್ಲು- ಪಡುಬೆಳ್ಳೆ- ಕುಂತಳನಗರ ಸಂಪರ್ಕ ರಸ್ತೆಯಲ್ಲಿರುವ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಮ ಸೇತುವೆ ಮತ್ತು ಸುತ್ತಮುತ್ತಲಿನ ಪರಿಸರದ ಜನರಲ್ಲಿ ನೆರೆ ಹಾವಳಿಯ ಆತಂಕ ಮನೆವಾಡಿದೆ.
ಪ್ರಕೃತಿಯ ವರದಾನವಾಗಬೇಕಿದ್ದ ಇತಿಹಾಸ ಪ್ರಸಿದ್ಧ ‘ಪಾಪನಾಶಿನಿ’ ನದಿ, ಇಂದು ಸೂಕ್ತ ನಿರ್ವಹಣೆಯಿಲ್ಲದೆ ಹೂಳು ತುಂಬಿ ಹೋಗಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಈ ಬಾರಿ ಭಾರಿ ಮಳೆಯಾದರೆ ನದಿಯ ನೀರು ಹರಿದು ಹೋಗಲು ಜಾಗವಿಲ್ಲದೆ, ಕೃತಕ ನೆರೆ ಸೃಷ್ಟಿಯಾಗಿ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವ ಕರಾಳ ಮುನ್ಸೂಚನೆ ಸಿಗುತ್ತಿದೆ.
ಭದ್ರಮ ಸೇತುವೆಯ ಬಳಿ ಕಳೆದ ವರ್ಷದ ಮಳೆಗಾಲದಲ್ಲಿ ತುಂಬಿ ಹರಿದ ಪಾಪನಾಶಿನಿ ನದಿ ನೀರು ಹಲವಾರು ಅವಾಂತರ ಸೃಷ್ಟಿಸಿ ಮನೆ, ಬೆಳೆ, ಕೃಷಿಯನ್ನು ಹಾಳು ವಾಡಿತ್ತು. ಇದೀಗ ನದಿ ಮಧ್ಯ ಭಾಗದಲ್ಲಿ ಹೂಳು ತುಂಬಿದ್ದು, ಮಳೆ ನೀರು ಸರಾಗವಾಗಿ ಹರಿಯಲು ಅನನುಕೂಲವಾಗಿದೆ. ಹವಾವಾನ ಇಲಾಖೆ ಈಗಾಗಲೇ ಕೆಲವೇ ದಿನಗಳಲ್ಲಿ ಮುಂಗಾರು ಪ್ರವೇಶದ ಸ್ಪಷ್ಟ ಮುನ್ಸೂಚನೆ ನೀಡಿದೆ. ಭೂಪ್ರದೇಶದ ಬಳಿ ನುಗ್ಗುವ ನೀರು ಉತ್ತಮ ಫಸಲು ನೀಡುತ್ತಿರುವ ಕೃಷಿ ಭೂಮಿಯನ್ನೇ ಕಬಳಿಸಲಿದೆ. ಹೀಗಾಗಿ ಈ ಭಾಗದ ಕೃಷಿಕರು ಕಂಗಾಲಾಗಿದ್ದಾರೆ.

ತಗ್ಗು ಪ್ರದೇಶಕ್ಕೆ ಅಪಾಯ

ಪಾಪನಾಶಿನಿ ನದಿ ಹರಿಯುವ ಪರಿಸರದ ಉದ್ದಕ್ಕೂ ಮಳೆಗಾಲದಲ್ಲಿ ಕೃತಕ ನೆರೆಯ ಭೀತಿ ಎದುರಾಗಿದೆ. ಕಳೆದ ಬಾರಿಯ ಮಳೆಗಾಲ ಸಂದರ್ಭದಲ್ಲೂ ಭದ್ರಮ ಸೇತುವೆ ಬಳಿಯ ಆಸುಪಾಸಿನ ಮನೆಗಳಿಗೆ ನದಿಯ ನೆರೆ ನೀರು ನುಗ್ಗಿದ್ದ ಪರಿಣಾಮ ಸಾಕಷ್ಟು ನಷ್ಟ ಉಂಟಾಗಿತ್ತು. ಈ ಬಾರಿಯೂ ನದಿಯಲ್ಲಿನ ಹೂಳಿನ ದಿಬ್ಬ ತೆರವು ನಡೆಯದಿದ್ದಲ್ಲಿ ನೆರೆ ನೀರು ಶಿರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಟ್ಟಿಂಜೆಯವರೆಗೂ ತುಂಬಿ ನದಿ ಪಾತ್ರದ ರೈತರಿಗೆ ತುಂಬಾ ನಷ್ಟ ಆಗುವ ಸಾಧ್ಯತೆಯೂ ಇದೆ. ಕೃಷಿ ಜಾನುವಾರುಗಳಿಗೆ, ಮನೆಗಳಿಗೆ ಅಪಾಯವೂ ಗ್ಯಾರಂಟಿ. ಜತೆಗೆ ತಗ್ಗು ಪ್ರದೇಶದ ಮನೆಯ ಮಂದಿ ಸಾಕಷ್ಟು ಸಂಕಟವನ್ನು ಎದುರಿಸಬೇಕಾದ ಅನಿವಾರ್ಯವಿದೆ.

ಜೀವನದಿಯ ಆಳ ಕುಂಠಿತ!

ಕಳೆದ ಕೆಲವು ವರ್ಷಗಳಿಂದ ನದಿಗೆ ಕೊಚ್ಚಿ ಬಂದ ಮಣ್ಣು, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಹೂಳು ನದಿಯ ಒಡಲನ್ನು ಸೇರಿದೆ. ಪರಿಣಾಮ ನದಿಯ ಆಳ ಗಣನೀಯವಾಗಿ ಕಡಿಮೆಯಾಗಿದ್ದು, ನಡುಗಡ್ಡೆಗಳು ಸೃಷ್ಟಿಯಾಗಿವೆ. ನದಿಯ ಪಾತ್ರ ಕಿರಿದಾಗುತ್ತಿರುವುದರಿಂದ, ಮಳೆಗಾಲದ ಆರಂಭಿಕ ದಿನಗಳಲ್ಲೇ ನದಿ ತುಂಬಿ ಹರಿಯುವ ಸಾಧ್ಯತೆಯಿದೆ. ಒಂದು ವೇಳೆ ನದಿಯ ನೀರು ರಸ್ತೆಗಳಿಗೆ ನುಗ್ಗಿದರೆ ಬಂಟಕಲ್ಲು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಅಪಾಯವಿದೆ. ತಕ್ಷಣ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕ್ಕಾಗಿ ಸ್ಪಂದಿಸಬೇಕಾಗಿದೆ. ಜನಪ್ರತಿನಿಧಿಗಳೂ ಈ ನಿಟ್ಟಿನಲ್ಲಿ ತಕ್ಷಣ ಸ್ಪಂದಿಸಿ ಇಲಾಖಾಧಿಕಾರಿಗಳ ಮೇಲೆ ಒತ್ತಡ ತಂದು ಈ ಭಾಗದ ಸಮಸ್ಯೆಗೆ ಮುಕ್ತಿ ನೀಡಬೇಕಾಗಿದೆ.

ನೂತನ ಸೇತುವೆ ನಿರ್ಮಿಸುವ ಸಂದರ್ಭ ಹಾಕಿದ ಮಣ್ಣನ್ನು ಸಂಪೂರ್ಣವಾಗಿ ತೆಗೆಯದ ಕಾರಣ ಅದರ ಮೇಲೆ ಹೂಳು ನಿಂತು ತಡೆಗೋಡೆಯಂತಾಗಿದೆ. ತೆರವುಗೊಳಿಸದಿದ್ದಲ್ಲಿ ಸ್ಥಳೀಯರು ತುಂಬಾ ಅಪಾಯದಲ್ಲಿ ಸಿಲುಕುತ್ತಾರೆ.

— ಸದಾನಂದ ಶೆಣೈ ಪ್ರಗತಿಪರ ಕೃಷಿಕ

ಆಶಯ ಪತ್ರ ಪಡೆದು ಮರಳು ದಿಬ್ಬಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗೆ ಆದಾಯವೂ ಆಗಿದೆ. ಆದರೆ ಆಶಯ ಪತ್ರದ ಅವಧಿ ಮುಗಿದಿರುವುದರಿಂದ ಮತ್ತೆ ಮರಳು ತೆಗೆಯುವುದು ಕಷ್ಟಸಾಧ್ಯ. ಇಲಾಖೆ ಮತ್ತೊಮ್ಮೆ ಆಶಯ ಪತ್ರ ಗ್ರಾಮ ಪಂಚಾಯಿತಿಗೆ ನೀಡಿದ್ದಲ್ಲಿ ಪಾಪನಾಶಿನಿಯಲ್ಲಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ವಾಡಿ ಅಪಾಯದಿಂದ ಪಾರಾಗಬಹುದು. ಕೃಷಿ ಮತ್ತು ಮನೆಗಳ ಮುಳುಗಡೆಯನ್ನು ತಪ್ಪಿಸಬಹುದು.

— ಶಶಿಧರ ವಾಗ್ಲೆ ಬೆಳ್ಳೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಉಪಾಧ್ಯಕ್ಷ

ಸ್ಥಳ ಪರಿಶೀಲಿಸಿ ಸಣ್ಣ ನೀರಾವರಿ ಇಲಾಖೆ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಲಾಗಿದೆ.

— ಆಶಾಲತಾ, ಬೆಳ್ಳೆ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net