ಪಂಚಮಿ ಪುರಸ್ಕಾರಕ್ಕೆ ನಟ ಟಿ. ಎನ್​. ಸೀತಾರಾಂ ಆಯ್ಕೆ

ಕನ್ನಡದ ಹಿರಿಯ ನಿರ್ದೇಶಕ, ನಟ ಟಿ.ಎನ್​. ಸೀತಾರಾಂ
ಕನ್ನಡದ ಹಿರಿಯ ನಿರ್ದೇಶಕ, ನಟ ಟಿ.ಎನ್​. ಸೀತಾರಾಂ
Published on
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಶ್ರಯದಲ್ಲಿ ಪಂಚಮಿ ಟ್ರಸ್ಟ್​ ವತಿಯಿಂದ ನೀಡುವ ಪಂಚಮಿ ಪುರಸ್ಕಾರಕ್ಕೆ ಕನ್ನಡದ ಹಿರಿಯ ನಿರ್ದೇಶಕ, ನಟ ಟಿ.ಎನ್​. ಸೀತಾರಾಂ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಲಕ ರವಿರಾಜ್​ ಎಚ್​.ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿ 25ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ 1 ಲಕ್ಷ ಗೌರವಧನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಸೀತಾರಾಂ ಸಾಧನೆ
ಮೂಲತ: ಗೌರಿಬಿದನೂರಿನವರಾದ ಸೀತಾರಾಂ ಅವರು ಬಿ.ಎಸ್ಸಿ, ಬಿ.ಎಲ್​ ಓದಿ ವಕೀಲ ವೃತ್ತಿಯಲ್ಲಿದ್ದರು. ಆಂತರ್ಯದ ತುಡಿತ ಅವರನ್ನು ಬರಹಗಾರನನ್ನಾಗಿಸಿತು. 22 ಸಣ್ಣ ಕತೆಗಳು ಪ್ರಕಟವಾಗಿವೆ. ಲಂಕೇಶ್​ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸತ ಪಲ್ಲವಿ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ್ದರು. ಸೀತಾರಾಂ ಪುಟ್ಟಣ್ಣ ಕಣಗಾಲ್​ ಅವರ ಮೂರು ಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಗಳನ್ನು ರಚಿಸಿದ ಕೀರ್ತಿಗೆ ಪಾತ್ರರಾದವರು. ಪುಟ್ಟಣ್ಣನವರ ಮಾನಸ ಸರೋವರ ಹಾಗೂ ಪಿ.ಎಚ್​.ವಿಶ್ವನಾಥ್​ ನಿರ್ದೇಶನದ ಪಂಚಮವೇದ ಚಿತ್ರಗಳ ಸಂಭಾಷಣೆಗಾಗಿ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. ಸೀತಾರಾಂ ಅವರು ಕಿರುತೆರೆಗೆ ನಿರ್ಮಿಸಿದ ಟಿ.ಪಿ. ಕೈಲಾಸಂ, ಆಸ್ಫೋಟ, ಮುಖಾಮುಖಿ, ಪತ್ತೇದಾರ ಪ್ರಭಾಕರ, ಕಾಲೇಜುತರಂಗ, ಎಲ್ಲ ಮರೆತಿರುವಾಗ, ನಾವೆಲ್ಲರೂ ಒಂದೇ, ದಶಾವತಾರ, ಕಾಮನಬಿಲ್ಲು, ಕತೆಗಾರ, ಜ್ವಾಲಾಮುಖಿ ಧಾರಾವಾಹಿಗಳು ಅತ್ಯಂತ ಮೆಚ್ಚುಗೆ ಗಳಿಸಿವೆ. ಬೆಂಗಳೂರು ದೂರದರ್ಶನಕ್ಕಾಗಿ ನಿರ್ದೇಶಿಸಿದ ಮಾಯಾಮೃಗ ಧಾರಾವಾಹಿ 435 ಕಂತುಗಳಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯಗೊಂಡಿತ್ತು. ಖಾಸಗಿ ವಾಹಿನಿಗಳಲ್ಲಿ ನೂರು ಕಂತುಗಳಲ್ಲಿ ಪ್ರಸಾರಗೊಂಡ ಮನ್ವಂತರ ಮತ್ತು ಮುಕ್ತ, ಮಗಳು ಜಾನಕಿ ಧಾರಾವಾಹಿಗಳು ಜನಮನಸೂರೆಗೊಂಡಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್​, ಪ್ರಶಸ್ತಿ ಸಮಿತಿ ಸಂಚಾಲಕ ಜನಾರ್ದನ ಕೊಡವೂರು, ಉಪಾಧ್ಯಕ್ಷ ಮಧುಸೂದನ ಹೇರೂರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net