ಅನ್ನರೂಪಿ ಭಗವಂತನಿಗೆ ಪಲ್ಲಪೂಜೆ

ಉಡುಪಿ ಶ್ರೀಕೃಷ್ಣ ಮಠದ ಭೋಜನ ಪಾಕಶಾಲೆಯಲ್ಲಿ ವೇದವರ್ಧನ ತೀರ್ಥ ಶ್ರೀಪಾದರು ಪಲ್ಲಪೂಜೆ ನೆರವೇರಿಸಿದರು.
ಉಡುಪಿ ಶ್ರೀಕೃಷ್ಣ ಮಠದ ಭೋಜನ ಪಾಕಶಾಲೆಯಲ್ಲಿ ವೇದವರ್ಧನ ತೀರ್ಥ ಶ್ರೀಪಾದರು ಪಲ್ಲಪೂಜೆ ನೆರವೇರಿಸಿದರು.
Published on

 ಪರ್ಯಾಯ ಶೀರೂರು ಶ್ರೀಗಳಿಂದ ದೇವತಾ ಪ್ರಾರ್ಥನೆ

* ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಮಧ್ವನವಮಿ ಆಚರಣೆ 

ಉಡುಪಿ: ಶ್ರೀಮಧ್ವನವಮಿ ಹಿನ್ನೆಲೆಯಲ್ಲಿ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಂಗಳವಾರ (ಜ.27) ಬೆಳಗ್ಗೆ ಪಲ್ಲಪೂಜೆ ನೆರವೇರಿಸಿದರು. ಅನ್ನದ ರೂಪದಲ್ಲಿರುವ ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅಕ್ಷಯ ಪಾತ್ರೆ ಹಾಗೂ ಸೌಟನ್ನು ಪಲ್ಲಕ್ಕಿಯಲ್ಲಿ ತಂದು ಭೋಜನ ಪಾಕಶಾಲೆಯಲ್ಲಿ ಸಿದ್ಧಪಡಿಸಿದ್ದ ಅನ್ನದ ರಾಶಿ (ಪಲ್ಲ)ಗೆ ಮಂಗಳಾರತಿ ಬೆಳಗಿದರು. ಶ್ರೀಕೃಷ್ಣನ ಭಕ್ತರಿಗೆ ನೀಡುವ ಪ್ರಸಾದ ಭೋಜನದ ಅನ್ನ ಅಕ್ಷಯವಾಗುವಂತೆ ಪ್ರಾರ್ಥಿಸಿ, ಪುಷ್ಪಗಳನ್ನು ಅರ್ಚಿಸಿದ ಅಕ್ಷಯ ಪಾತ್ರೆಯ ಸೌಟನ್ನು ಅನ್ನದ ರಾಶಿಯಲ್ಲಿ ಇಟ್ಟರು.

ಅನ್ನವೇ ಬ್ರಹ್ಮ

ಅನ್ನಬ್ರಹ್ಮನಾದ ಶ್ರೀಕೃಷ್ಣನಿಗೆ ಎಲ್ಲವನ್ನೂ ಶಾಸ್ತ್ರೀಯ, ಸಂಪ್ರದಾಯದ ರೀತಿಯಲ್ಲಿ ಸಮರ್ಪಿಸಿ ಅದನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡುವುದು ಉಡುಪಿ ಮಠದ ವಿಶೇಷತೆಯಾಗಿದೆ. ಅನ್ನವೇ ಬ್ರಹ್ಮವಾಗಿದೆ. ನಮಗೆಲ್ಲರಿಗೂ ಬದುಕಲು ಆಹಾರದ ರೂಪದಲ್ಲಿ ಶಕ್ತಿ ನೀಡುವ ಅನ್ನವನ್ನು ಪೂಜಿಸುವುದು, ಗೌರವಿಸುವುದು ಹಿಂದು ಧರ್ಮದ ಸಂಪ್ರದಾಯ. ಉಡುಪಿಯಲ್ಲಿ ನೆಲದ ಮೇಲೆ ಅನ್ನ ಹಾಕಿ ಊಟ ಮಾಡುವ ಆಚರಣೆಯಿದ್ದು, ಅನೇಕ ಭಕ್ತರು ಅನುಸರಿಸುತ್ತಾರೆ. ನೆಲದಲ್ಲಿ ಊಟ ಮಾಡುವ ಕುರಿತಾಗಿ ಪದ್ಮಪುರಾಣದಲ್ಲಿ 'ಭೂಮೌ ಭುಂಗ್ತೆ ಸದಾಯಸ್ತು ಸ: ಪೃಥವ್ಯಾದಿಪೋ ಭವತಿ' ಎಂಬ ಉಲ್ಲೇಖವಿದೆ ಎನ್ನುತ್ತಾರೆ ಶೀರೂರು ಮಠದ ದಿವಾನ ಡಾ.ಉದಯಕುಮಾರ್​ ಸರಳತ್ತಾಯ.
"

ವಿಶೇಷ ದಿನಗಳಲ್ಲಿ ಪಲ್ಲಪೂಜೆ ಮಾಡುವುದು ಶ್ರೀಕೃಷ್ಣನ ಮಠದ ಸಂಪ್ರದಾಯ. ಎಷ್ಟು ಭಕ್ತರು ಭೋಜನಕ್ಕೆ ಬರುತ್ತಾರೆನ್ನುವುದು ತಿಳಿಯುವುದಿಲ್ಲ. ಹೀಗಾಗಿ ಎಷ್ಟೇ ಸಹಸ್ರ ಸಂಖ್ಯೆಯಲ್ಲಿ ಬಂದರೂ ಅನ್ನ ಕ್ಷಯ (ಕೊರತೆ) ಆಗಬಾರದೆಂದು ಭಗವಂತನಲ್ಲಿ ಪ್ರಾರ್ಥಿಸಿ, ಅಕ್ಷಯ ಪಾತ್ರೆಯ ಸೌಟನ್ನು ಅನ್ನದ ರಾಶಿಯ ಮಧ್ಯದಲ್ಲಿ ಇಟ್ಟು ಪೂಜಿಸುವುದೇ ಪಲ್ಲಪೂಜೆಯಾಗಿದೆ. ಇದರಿಂದ ಅನ್ನ ಅಕ್ಷಯ (ಹೆಚ್ಚು)ವಾಗುತ್ತದೆ. ವಾಯುದೇವನಾದ ಹನುಮಂತನೇ ಶ್ರೀಕೃಷ್ಣನ ಭಕ್ತರಿಗಾಗಿ ಇಲ್ಲಿ ಅಡುಗೆ ಮಾಡುತ್ತಾನೆ ಎಂಬ ಪ್ರತೀತಿಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net