ಪಡುಪಾಲೆ ಸಂಪರ್ಕ ರಸ್ತೆ ಪಾಡು

ಅತ್ಯಂತ ಕಿರಿದಾದ ಹಾಗೂ ಡಾಂಬರ್​ ಕಿತ್ತುಹೋಗಿ ಹದಗೆಟ್ಟಿರುವ ಉಡುಪಿ ಮಣಿಪಾಲ ಸಮೀಪದ ಪಡುಪಾಲೆ ಸಂಪರ್ಕ ರಸ್ತೆ.
ಅತ್ಯಂತ ಕಿರಿದಾದ ಹಾಗೂ ಡಾಂಬರ್​ ಕಿತ್ತುಹೋಗಿ ಹದಗೆಟ್ಟಿರುವ ಉಡುಪಿ ಮಣಿಪಾಲ ಸಮೀಪದ ಪಡುಪಾಲೆ ಸಂಪರ್ಕ ರಸ್ತೆ.
Published on: 

* ಸರಳೆಬೆಟ್ಟು, ಶೆಟ್ಟಿಬೆಟ್ಟು ವಾರ್ಡ್​ನ ದುಸ್ಥಿತಿ

* ವಾಹನ ಸವಾರರಿಗೆ ದಿನವೂ ಫಜೀತಿ

ಉಡುಪಿ: ದೇಶದ ಗಮನ ಸೆಳೆಯುವ ಮಣಿಪಾಲದ ಪಕ್ಕದಲ್ಲೇ ಇರುವ ಸರಳೆಬೆಟ್ಟು ಮತ್ತು ಶೆಟ್ಟಿಬೆಟ್ಟು ವಾರ್ಡ್​ನ ಮಧ್ಯದಲ್ಲಿರುವ ಪಡುಪಾಲೆ ಗ್ರಾಮದ ರಸ್ತೆಯ ಪಾಡು ಹೇಳತೀರದು. ಈ ಮಾರ್ಗ ಡಾಂಬರ್​ ಕಾಣದೆ ದಶಕಗಳೇ ಉರುಳಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಪಡುಪಾಲೆ ಸಂಪರ್ಕಿಸುವ ಈ ಮಾರ್ಗದಲ್ಲಿ ಸುಮಾರು ಒಂದೂವರೆ ಕಿಮೀಯಷ್ಟು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೊಂಡಗಳಿಂದಲೇ ಭರ್ತಿಯಾದ ಈ ರೋಡ್​ನಲ್ಲಿ ಸುಗಮ ಸಂಚಾರಕ್ಕೆ ತೀವ್ರ ತೊಡಕಾಗಿದೆ.

400ಕ್ಕೂ ಹೆಚ್ಚು ಮನೆ

ಈ ಮಾರ್ಗದಲ್ಲಿ 400ಕ್ಕೂ ಅಧಿಕ ಮನೆ, ವಸತಿ ಸಮುಚ್ಚಯಗಳಿವೆ. ಹೀಗಾಗಿ ಇದು ಪ್ರಮುಖ ಮಾರ್ಗವೂ ಆಗಿದೆ. ಸ್ವರ್ಣ ನದಿ ಕೋಡಿ ಭಾಗದ ಬಬ್ಬುಸ್ವಾಮಿ ಲೇಔಟ್​ ಸಹ ಇಲ್ಲಿದೆ. ಇಲ್ಲಿ ಹಿಂದುಳಿದ ವರ್ಗದ ಜನಾಂಗದವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದಾರೆ. ಮಳೆಗಾಲದ ಆರಂಭದಲ್ಲಿ ಬಿದ್ದ ಮಳೆಯಿಂದಾಗಿ ಈ ರಸ್ತೆ ಇನ್ನಷ್ಟು ಹಾನಿಗೊಂಡಿದೆ. ರಸ್ತೆಗಳಲ್ಲಿ ಅಲ್ಲಲ್ಲಿ ಮಾತ್ರ ಡಾಂಬರ್​ ಗೋಚರಿಸುತ್ತಿದೆ.

ಸ್ಪಂದಿಸದ ಅಧಿಕಾರಿಗಳು

ಮಣಿಪಾಲದ ಎಂಡ್​ ಪಾಯಿಂಟ್​ ಮೂಲಕವೂ ಸಹ ಪಡುಪಾಲೆ ಗ್ರಾಮಕ್ಕೆ ತೆರಳಬಹುದಾಗಿದೆ. ಆದರೆ, ಅಲ್ಲಿನ ರಸ್ತೆಗೆ ಗೇಟ್​ ಅಳವಡಿಸಿದ್ದರಿಂದ ಅನ್ಯ ವಾಹನಗಳ ಪ್ರವೇಶಕ್ಕೆ ಅವಕಾಶ ಇಲ್ಲದಾಗಿದೆ. ನಮ್ಮೂರಿನ ರಸ್ತೆ ಸರಿಪಡಿಸಿ ಎಂದು ಜನರು ನಗರಸಭೆಗೆ ಹಾಗೂ ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳುವವರು ಇಲ್ಲ ಎನ್ನುತ್ತಾರೆ ಈ ಮಾರ್ಗದಲ್ಲಿ ಸಂಚರಿಸುವ ಪಡುಪಾಲೆಯ ನಾಗರಿಕರು.

ಪಡುಪಾಲೆ ಮಾರ್ಗದ ರಸ್ತೆ ಪೂರ್ಣ ಹಾಳಾಗಿದೆ. ಅಲ್ಲದೆ, ಕೆಲವು ಕಡೆ ಇಕ್ಕೆಲಗಳಲ್ಲಿ ರಸ್ತೆ ಅರ್ಧ ಕುಸಿದಿದೆ. ಪರಿಶಿಷ್ಟ ಜಾತಿ, ಪಂಗಡದವರ ನೂರಾರು ಮನೆಗಳಿರುವ ಕಾಲನಿಯೂ ಅಲ್ಲಿದೆ. ಹೀಗಾಗಿ ಎಸ್​ಸಿ, ಎಸ್​ಟಿ ಅನುದಾನವನ್ನಾದರೂ ಬಳಸಿ ಈ ರಸ್ತೆಗೆ ಡಾಂಬರ್​ ಹಾಕಬೇಕು. ರಸ್ತೆಯೂ ಅತ್ಯಂತ ಕಿರಿದಾಗಿದ್ದು ಅಗಲವನ್ನೂ ತುಸು ಹೆಚ್ಚಿಸಿದರೆ ವಾಹನ ಸಂಚಾರಕ್ಕೂ ಹೆಚ್ಚು ಪ್ರಯೋಜನ ಆಗಲಿದೆ.

> ಗಣೇಶ್​ ರಾಜ್​ ಸರಳೆಬೆಟ್ಟು. ಸಾಮಾಜಿಕ ಕಾರ್ಯಕರ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net