ನಿಸ್ವಾರ್ಥದ ಸೇವೆಯಿಂದ ಭಗವಂತನೊಲುಮೆ

ಉಡುಪಿಯ ಕಿದಿಯೂರ್ಸ್​ ಲಾರ್ಡ್ಸ್​ ಇಂಟರ್​ನ್ಯಾಷನಲ್​ ರೆಸಿಡೆನ್ಶಿಯಲ್​ ಸ್ಕೂಲ್​ನಲ್ಲಿ ಸುಗುಣೇಂದ್ರ ಶ್ರೀಗಳ ಪಾದಪೂಜೆ ನೆರವೇರಿಸಿ, ಶ್ರೀಗಳಿಗೆ ಅಭಿನಂದನಾ ಪತ್ರ ನೀಡಲಾಯಿತು. ಭುವನೇಂದ್ರ ಕಿದಿಯೂರು, ನಾಗರಾಜ್​ ಆಚಾರ್ಯ, ದಿನಕರ್​, ರತೀಶ್​ ತಂತ್ರಿ, ವಿಕಾಸಕುಮಾರ್​ ಜೈನ್​, ಲಕ್ಷೀನಾರಾಯಣ ಉಪಾಧ್ಯ ಇದ್ದರು.
ಉಡುಪಿಯ ಕಿದಿಯೂರ್ಸ್​ ಲಾರ್ಡ್ಸ್​ ಇಂಟರ್​ನ್ಯಾಷನಲ್​ ರೆಸಿಡೆನ್ಶಿಯಲ್​ ಸ್ಕೂಲ್​ನಲ್ಲಿ ಸುಗುಣೇಂದ್ರ ಶ್ರೀಗಳ ಪಾದಪೂಜೆ ನೆರವೇರಿಸಿ, ಶ್ರೀಗಳಿಗೆ ಅಭಿನಂದನಾ ಪತ್ರ ನೀಡಲಾಯಿತು. ಭುವನೇಂದ್ರ ಕಿದಿಯೂರು, ನಾಗರಾಜ್​ ಆಚಾರ್ಯ, ದಿನಕರ್​, ರತೀಶ್​ ತಂತ್ರಿ, ವಿಕಾಸಕುಮಾರ್​ ಜೈನ್​, ಲಕ್ಷೀನಾರಾಯಣ ಉಪಾಧ್ಯ ಇದ್ದರು.
Published on

* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

* ಕಿದಿಯೂರು ಕುಟುಂಬದಿಂದ ಪಾದಪೂಜೆ ಸ್ವೀಕಾರ

ಉಡುಪಿ: ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ನಮ್ಮ ಚತುರ್ಥ ಪರ್ಯಾಯದ ಅವಕಾಶದಲ್ಲಿ ಶ್ರೀಕೃಷ್ಣ ದೇವರಿಗೆ ಗರಿಷ್ಠ ಪ್ರಮಾಣದಲ್ಲಿ ಸೇವೆ ಮಾಡಿದ್ದೇವೆ. ಶ್ರದ್ಧೆ-ಭಕ್ತಿಯಿಂದ ಪೂಜಿಸಿದ್ದೇವೆ. ಉಡುಪಿಯ ಶ್ರೀಕೃಷ್ಣನು ಭಕ್ತವತ್ಸಲನಾಗಿದ್ದು, ನಂಬಿ ಬಂದವರಿಗೆ ಶ್ರೀವಾಗಿ ಒಲಿಯುತ್ತಾನೆ. ಇನ್ನೊಬ್ಬರ ಒಳ್ಳೆಯ ಗುಣ ಗುರುತಿಸುವ ಕಾರ್ಯ ಶ್ರೇಷ್ಠವಾಗಿದ್ದು, ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಗೆ ಭಗವಂತನ ಒಲುಮೆ ಲಭಿಸುತ್ತದೆ ಎಂದು ಪುತ್ತಿಗೆ ಮಠದ ಹಿರಿಯ ಯತಿ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ನಿಟ್ಟೂರಿನಲ್ಲಿರುವ ಕಿದಿಯೂರ್ಸ್​ ಲಾರ್ಡ್ಸ್​ ಇಂಟರ್​ನ್ಯಾಷನಲ್​ ರೆಸಿಡೆನ್ಶಿಯಲ್​ ಸ್ಕೂಲ್​ನಲ್ಲಿ ಸ್ಥಾಪಕ ಭುವನೇಂದ್ರ ಕಿದಿಯೂರು ಹಾಗೂ ಅವರ ಕುಟುಂಬದವರು ಶುಕ್ರವಾರ (ಜ.23) ಆಯೋಜಿಸಿದ್ದ ಪಾದಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವಿಶ್ವರೂಪ ಪರ್ಯಾಯ

ಉದ್ಯಮಿ ಭುವನೇಂದ್ರ ಕಿದಿಯೂರು ಮಾತನಾಡಿ, ಸಂಪನ್ನಗೊಂಡ ಪುತ್ತಿಗೆ ಶ್ರೀಗಳ ಚತುರ್ಥ ಪರ್ಯಾಯ ವರ್ಣಿಸಲು ಅಸಾಧ್ಯ. ಕೃಷ್ಣಭಕ್ತರಿಗೆ ಐದು ಬಗೆಯ ಸಿಹಿಖಾದ್ಯದೊಂದಿಗೆ ದಿನವೂ ಅನ್ನದಾನದ ಮೂಲಕ ಪರ್ಯಾಯವನ್ನು ವಿಜೃಂಭಿಸಿದ್ದಾರೆ. 1,850ಕ್ಕೂ ಅಧಿಕ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಾಧಕರು, ವಿದ್ವಾಂಸರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದ ಶ್ರ್ರೀಗಳ ಪರ್ಯಾಯ ವಿಶ್ವರೂಪ ದರ್ಶನ ಮಾಡಿಸಿದೆ. ಅವರ ವಿಚಾರ, ಯೋಜನೆ ಊಹಿಸಲೂ ಅಸಾಧ್ಯ. ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀಗಳಂತೂ ನಿತ್ಯವೂ ವಿಶೇಷ ಅಲಂಕಾರಗಳ ಮೂಲಕ ಭಕ್ತರಿಗೆ ಕೃಷ್ಣನ ವಿರಾಟ್​ ಸ್ವರೂಪ ತೋರಿಸಿದ್ದಾರೆ. ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಉಡುಪಿಗೆ ಕರೆಸಿ, ಅವರೂ ಭಗವದ್ಗೀತೆ ಪಠಿಸುವಂತೆ ಮಾಡಿಸಿದ್ದು ಸಾಮಾನ್ಯ ಕಾರ್ಯವಲ್ಲ ಎಂದು ಶ್ಲಾಘಿಸಿ, ಶ್ರೀಕೃಷ್ಣನು ಖಂಡಿತ ಸುಗುಣೇಂದ್ರರಿಗೆ ಒಲಿದಿದ್ದಾನೆ ಎಂದರು.

ಶ್ರೀಗಳಿಗೆ ಅಭಿನಂದನಾ ಪತ್ರ

ಪುತ್ತಿಗೆ ಶ್ರೀಗಳು ತಮ್ಮ ಚತುರ್ಥ 'ವಿಶ್ವಗೀತಾ' ಪರ್ಯಾಯವನ್ನು ಹಾಗೂ ಶ್ರೀಕೃಷ್ಣನ ಸೇವೆಯನ್ನು 'ನ ಭೂತೋ ನ ಭವಿಷ್ಯತಿ ಎಂಬ ರೀತಿಯಲ್ಲಿ ಆಚರಿಸಿದ ಹಿನ್ನೆಲೆಯಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಉದ್ಯಮಿಯಾಗಿ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಲ್ಲೂ ಪಾಲ್ಗೊಂಡು ಮಾದರಿಯಾಗಿರುವ ಭುವನೇಂದ್ರ ಕಿದಿಯೂರು ಅವರಿಗೆ ಪುತ್ತಿಗೆ ಶ್ರೀಗಳು 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು.
ಹಿರಿಯಣ್ಣ ಟಿ. ಕಿದಿಯೂರು, ಡಾ.ಭವ್ಯಾ ಕಿದಿಯೂರು, ಶ್ರೀಶ ಉಪಾಧ್ಯಾಯ, ದಿನಕರ್​, ಶೋಭಾ ದಿನಕರ್​, ವಿಕ್ರಂ ಕುಂಟಾರ್​, ಪುತ್ತಿಗೆ ಮಠದ ದಿವಾನ ನಾಗರಾಜ್​ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ, ಕಿದಿಯೂರ್​ ಹೋಟೆಲ್​ನ ಮೆನೇಜರ್​ ವಿಕಾಸಕುಮಾರ್​ ಜೈನ್​, ಲಕ್ಷೀನಾರಾಯಣ ಉಪಾಧ್ಯ, ಶಾಲೆಯ ಬೋಧಕರು, ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳು ವಿನಾಯಕ ಸ್ತುತಿ ಭಜಿಸಿದರು. ಶಿಕ್ಷಕ ಕಿರಣಕುಮಾರ್​ ಸ್ವಾಗತಿಸಿದರು. ವಿದ್ವಾನ್​ ದಾಮೋದರ್​ ಶಮಾರ್ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.
"

ಪೀಠಾಧಿಪತಿಗಳಿಗೆ ದೇವರ ಸೇವೆ, ಧರ್ಮ ರಕ್ಷಣೆಯ ಕರ್ತವ್ಯಕ್ಕಿಂತ ಬೇರೇನೂ ಮಾಡಲಾಗದು. ಈ ಕರ್ತವ್ಯ ಮಾಡದಿದ್ದರೆ ಲೋಪವಾಗುತ್ತದೆ. ಆದರೆ, ಭುವನೇಂದ್ರ ಕಿದಿಯೂರು ಅವರು ಹೋಟೆಲ್​, ಟೆಂಪಲ್​, ಸ್ಕೂಲ್​ಗಳೆಂಬ ಮೂರು 'ಲ'ಕಾರ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಉದ್ಯಮಿಗಳು ಹಣ ವೃದ್ಧಿಗಷ್ಟೇ ಆದ್ಯತೆ ನೀಡುತ್ತಾರೆ. ಆದರೆ, ಭುವನೇಂದ್ರರು ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ಉದ್ಯಮಿಗಳಿಗೇ ಮಾದರಿಯಾಗಿದ್ದಾರೆ. ಉದ್ಯಮಿಗಳೆಲ್ಲ ಇವರಂತಹ ಗುಣ ಅಳವಡಿಸಿಕೊಂಡರೆ ಭೂಲೋಕವೇ ಸ್ವರ್ಗವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net