ಇಂಧನ ಬೆಲೆಯೇರಿಕೆ ವಿರೋಧಿಸಿ ಕೆಎಸ್‌ಯು ವತಿಯಿಂದ ಕಾಸರಗೋಡು ನಗರದಲ್ಲಿ ದ್ವಿಚಕ್ರವಾಹನ ತಳ್ಳಿಕೊಂಡು ಸಾಗುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಮನಾಫ್ ನುಳ್ಳಿಪಾಡಿ, ಜಾವೇದ್ ಪುತ್ತೂರು, ಅಖಿಲ್ ಜಾನ್ ಇತರರು ಇದ್ದರು.
ಕಾಸರಗೋಡು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕೆಎಸ್‌ಯು ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೈಕ್‌ಗಳನ್ನು ರಸ್ತೆಯಲ್ಲಿ ತಳ್ಳಿ ಸಾಗುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಕಾಸರಗೋಡಿನ ಹೊಸ ಬಸ್ ನಿಲ್ದಾಣದಿಂದ ಪ್ರೆಸ್‌ಕ್ಲಬ್ ಜಂಕ್ಷನ್‌ನಲ್ಲಿರುವ ಪೆಟ್ರೋಲ್ ಪಂಪ್‌ವರೆಗೆ ಸಾಗಿದರು.
ಎಐಸಿಸಿ ಕೋಆರ್ಡಿನೇಟರ್ ಮನಾಫ್ ನುಳ್ಳಿಪಾಡಿ ಮಾತನಾಡಿ, ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿ ವಿದೇಶ ಪ್ರವಾಸ ನಡೆಸುತ್ತಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಮೌನವಹಿಸಿದೆ ಎಂದು ಆರೋಪಿಸಿದರು.
ಕೆಎಸ್‌ಯು ಕಾಸರಗೋಡು ಜಿಲ್ಲಾಧ್ಯಕ್ಷ ವಕೀಲ ಜಾವೇದ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಖಿಲ್ ಜಾನ್, ವಿಷ್ಣು ಇರಿಯಣ್ಣಿ, ಸುಜಿತ್ ಎಸ್, ವೈಷ್ಣವ್ ಕೋಳಿಚ್ಚಾಲ್, ಶಾಜಾ ಪಟ್ಲ ಇದ್ದರು. ಜಿಲ್ಲಾ ಕಾರ್ಯದರ್ಶಿ ಆದರ್ಶ್ ಕೆ. ಸ್ವಾಗತಿಸಿದರು. ಅನ್ಸಾರಿ ವಂದಿಸಿದರು.