ಸಾವಯವ ಭತ್ತ ತಳಿ ಸಂರಕ್ಷಣೆಗೆ ಪಾದಯಾತ್ರೆ: ಸೋದೆ ಶ್ರೀ

  ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಶುದ್ಧ ನೈವೇದ್ಯ ಸಮರ್ಪಣೆ ಅಭಿಯಾನ ಉದ್ಘಾಟಿಸಿದರು.
ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಶುದ್ಧ ನೈವೇದ್ಯ ಸಮರ್ಪಣೆ ಅಭಿಯಾನ ಉದ್ಘಾಟಿಸಿದರು.
Published on
ಉಡುಪಿ: ಭಾರತ ಕೃಷಿ ಪ್ರಧಾನ ದೇಶ. ಹಿಂದಿನ ಕಾಲದಲ್ಲಿ ಶ್ರೀಮಂತಿಕೆಯ ಮಾನದಂಡ ಕೃಷಿಯನ್ನು ಅವಲಂಬಿತವಾಗಿತ್ತು. ಆದರೆ ಇತ್ತೀಚೆಗೆ ಕೃಷಿ ಮರೆಯಾಗುತ್ತಿದೆ. ಪಾರಂಪರಿಕ ಕೃಷಿ ವೈವಿಧ್ಯತೆ ನಶಿಸಿಹೋಗುತ್ತಿದೆ. ಈ ನಿಟ್ಟಿನಲ್ಲಿ ಸಾವಯವ ಭತ್ತ ತಳಿ ಸಂರಕ್ಷಣೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಸೋದೆ ವಾದಿರಾಜ ಮಠದಲ್ಲಿ ತೀರ್ಥಹಳ್ಳಿ ಕೃಷಿ ಪ್ರಯೋಗ ಪರಿವಾರ ಸಂಸ್ಥೆ ಆಶ್ರಯದಲ್ಲಿ ನಡೆದ ಶುದ್ಧ ನೈವೇದ್ಯ ಸಮರ್ಪಣೆ ಅಭಿಯಾನದಲ್ಲಿ ರೈತರಿಗೆ ಬೊಗಸೆ ಭತ್ತದ ಬೀಜ ವಿತರಿಸಿ ಆಶೀರ್ವಚನ ನೀಡಿದರು.
ಸಾವಯವ ಕೃಷಿ ಉಳಿಸಿ ಬೆಳೆಸುವುದು ಅನ್ನ ತಿನ್ನುವ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಶುದ್ಧ ನೈವೇದ್ಯ ಸಮರ್ಪಣಂ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2028ರಲ್ಲಿ ಪ್ರಾರಂಭವಾಗುವ ಸೋದೆ ಮಠದ ಪರ್ಯಾಯದಲ್ಲಿ ಕೃಷ್ಣ ದೇವರಿಗೆ 365 ದಿನ 365 ಬಗೆಯ ದೇಸಿ ತಳಿಯ ಅಕ್ಕಿಯಿಂದ ಮಾಡಿದ ನೈವೇದ್ಯ ಸಮರ್ಪಿಸಲಾಗುವುದು ಎಂದರು.
ಸಾವಯವ ಮಿಷನ್​ ಮಾಜಿ ಅಧ್ಯಕ್ಷ ಕೆ.ಆನಂದ್​ ಮಾತನಾಡಿದರು. ಹಾದಿಗಲ್ಲು ಅಭಯ ಲಕ್ಷ್ಮಿನೃಸಿಂಹ ದೇವಸ್ಥಾನದ ಧರ್ಮದರ್ಶಿ ಲಕ್ಷ್ಮಿನಾರಾಯಣ್​, ಕೃಷಿ ಪ್ರಯೋಗ ಪರಿವಾರದ ನಿರ್ವಾಹಕ ವಿಶ್ವಸ್ಥ ದಿನೇಶ್​ ಸರು, ಸೋದೆ ಮಠದ ದಿವಾನ್​ ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದರು. ಕೃಷಿ ಪರಿವಾರದ ಪ್ರಮುಖ್​ ಅರುಣ್​ ಕುಮಾರ್​ ಬಿ.ಕೆ. ಸ್ವಾಗತಿಸಿದರು. ಶ್ರೀವತ್ಸ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ್​ ಭಟ್​ ವಂದಿಸಿದರು. ರಾಜ್ಯಾದ್ಯಂತ 10 ಜಿಲ್ಲೆಗಳಿಂದ ಆಗಮಿಸಿದ ರೈತರು ವಿವಿಧ ದೇಸಿ ತಳಿ ಭತ್ತದ ಬೀಜವನ್ನು ಪಡೆದುಕೊಂಡರು.
"

ಗದ್ದೆಯಿಂದ ಗರ್ಭಗುಡಿಗೆ
ಬೊಗಸೆ ಭತ್ತದ ಬೀಜ ಪಡೆದ ರೈತರು ಶುದ್ಧಭಾವದಿಂದ ಅಕ್ಕಿಯನ್ನ ಬೆಳೆಯಬೇಕು. ತಾವು ಬೆಳೆದ ಅಕ್ಕಿ ಗದ್ದೆಯಿಂದ ಗರ್ಭಗುಡಿಗೆ ಸೇರುತ್ತದೆ. ಹೀಗಾಗಿ ಸಾವಯವ ಕೃಷಿಯನ್ನು ಅವಲಂಬಿಸುವ ಸಂಕಲ್ಪ ಮಾಡಿ. ರೈತರಿಗೆ ಸೂಕ್ತ ಬೆಲೆಯನ್ನು ನೀಡಿ ಕೊಂಡುಕೊಳ್ಳುವ ಜಬಾವ್ದಾರಿ ಮಠ ವಹಿಸಿಕೊಳ್ಳಲಿದೆ. ಜೊತೆಗೆ ದೇವಸ್ಥಾನಗಳಲ್ಲಿ ಅನ್ನದಾನಕ್ಕೆ ಸಾವಯವ ಅಕ್ಕಿಯನ್ನು ಖರೀದಿಸುವಂತೆ ತಿಳಿಸುತ್ತೇವೆ.

— ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net