ಚಾಲಿಂಗಲ್‌ನಲ್ಲಿ ಟೋಲ್‌ಗೆ ವಿರೋಧ

 ಟೋಲ್ ವಿರುದ್ಧ ಪ್ರತಿಭಟನೆಗೆ ಸ್ಥಳೀಯರು ಮುಂದಾಗಿರುವುದು.
ಟೋಲ್ ವಿರುದ್ಧ ಪ್ರತಿಭಟನೆಗೆ ಸ್ಥಳೀಯರು ಮುಂದಾಗಿರುವುದು.
Published on
ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ
ರಾಷ್ಟ್ರೀಯ ಹೆದ್ದಾರಿ 66ರ ಚಾಲಿಂಗಲ್‌ನಲ್ಲಿ ಪೂರ್ಣಗೊಳ್ಳುತ್ತಿರುವ ಟೋಲ್‌ನಲ್ಲಿ ಪ್ರಸಕ್ತ ತಿಂಗಳಾಂತ್ಯದಿಂದಲೇ ಪ್ರಾರಂಭಗೊಳ್ಳಲಿರುವ ಟೋಲ್ ಸಂಗ್ರಹವನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದು, ಮೂಲಸೌಕರ್ಯಗಳ ಕೆಲಸ ಪೂರ್ಣಗೊಳ್ಳದೇ ಟೋಲ್‌ಗೆ ಅವಕಾಶ ನೀಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಭಾಗವಾಗಿ ನಿರ್ಮಿಸಲಾಗುತ್ತಿರುವ ಚಾಲಿಂಗಲ್ ಟೋಲ್ ಗೇಟ್ ತಲಪಾಡಿ ನಂತರ ಈ ವಾರ್ಗದಲ್ಲಿ ಸಿಗುವ ಎರಡನೇ ಟೋಲ್ ಗೇಟ್ ಇದಾಗಲಿದ್ದು, ರಸ್ತೆ, ಚರಂಡಿ ಸಹಿತ ವಿವಿಧ ಮೂಲಸೌಕರ್ಯಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಗತ್ಯ ಕ್ಯಾಮರಾಗಳು, ಸಂವೇದಕಗಳು ಮತ್ತು ವಾಹನ ಗುರುತಿಸುವಿಕೆ ವ್ಯವಸ್ಥೆಗಳು ಈಗಾಗಲೇ ಸ್ಥಾಪನೆಯಾಗಿದ್ದು, ನಿಯಂತ್ರಣ ಕೊಠಡಿ, ಕಟ್ಟಡಗಳು, ಪಾದಚಾರಿ ಸೇತುವೆ ಮತ್ತು ಬೆಳಕಿನ ವ್ಯವಸ್ಥೆಗಳ ಫಿನಿಶಿಂಗ್ ಕಾರ್ಯ ನಡೆಯುತ್ತಿದೆ.

ಸರ್ವೀಸ್ ರಸ್ತೆಗಳಲ್ಲಿ ಸಮಸ್ಯೆ

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸರ್ವೀಸ್ ರಸ್ತೆಗಳು ಬಹಳ ಕಡೆಗಳಲ್ಲಿ ಶಿಥಿಲಾವಸ್ಥೆಯಲ್ಲಿದ್ದು, ಜತೆಗೆ ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆ ಮೇಲೆಯೇ ಸಂಗ್ರಹಗೊಳ್ಳುತ್ತದೆ. ಸರ್ವೀಸ್ ರೋಡ್‌ನಲ್ಲಿ ಸಂಚರಿಸುವವರು ರಸ್ತೆ ಗುರುತಿಸಲಾಗದೆ ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಸ್ಥಳೀಯರು ಈ ಕುರಿತು ಸಂಬಂಧಿತ ಜನಪ್ರತಿನಿಧಿಗಳ ಗಮನಕ್ಕೆ ತಂದಿರುವುದರ ಜತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಲಿಖಿತ ಮನವಿ ಮಾಡಲಾಗಿದ್ದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಚಾಲಿಂಗಲ್ ಸ್ಥಳೀಯರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದು, ಅಧಿಕಾರಿಗಳು ಶೀಘ್ರವೇ ಸೂಕ್ತ ವ್ಯವಸ್ಥೆಗಳ ಕಲ್ಪಿಸಿ ಟೋಲ್ ಸಂಗ್ರಹ ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.

ಪ್ರತಿಭಟನೆಯಿಂದ ಅರಿಕ್ಕಾಡಿ ಟೋಲ್ ರದ್ದು

ಕುಂಬಳೆ ಅರಿಕ್ಕಾಡಿಯಲ್ಲಿ ತಾತ್ಕಾಲಿಕ ಟೋಲ್‌ಗೇಟ್ ತೆರೆದಿರುವುದನ್ನು ವಿರೋಧಿಸಿ ಸ್ಥಳೀಯರು, ವ್ಯಾಪಾರಿಗಳು ಮತ್ತು ವಿವಿಧ ಸಾವಾಜಿಕ ಸಂಟನೆಗಳು ಭಾರಿಮಟ್ಟದಲ್ಲಿ ಪ್ರತಿಭಟಿಸಿದ್ದವು. ಬಳಿಕ ಅಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸಿ ನಂತರ ರದ್ದುಗೊಳಿಸಲಾಯಿತು. ಅಂತಿಮವಾಗಿ ಚಾಲಿಂಗಲ್‌ನಲ್ಲಿಯೂ ಟೋಲ್ ಕೆಲಸ ಪೂರ್ಣಗೊಂಡಿತು.

ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸದೆ ಟೋಲ್ ಸಂಗ್ರಹ ಪ್ರಾರಂಭಿಸುವುದು ಅನ್ಯಾಯ. ಸರ್ವೀಸ್ ರಸ್ತೆಗಳು ಮತ್ತು ಚರಂಡಿ ಕಾಮಗಾರಿ ಪೂರ್ಣಗೊಂಡ ನಂತರವೇ ಟೋಲ್ ಸಂಗ್ರಹ ಪ್ರಾರಂಭಿಸಬೇಕು. ಪ್ರಾಧಿಕಾರ, ಅಧಿಕಾರಿಗಳು ಆತುರದ ನಿರ್ಧಾರ ಕೈಗೊಂಡರೆ ಮುಷ್ಕರ ಅನಿರ್ವಾಯವಾಗಲಿದೆ.

— ಭಾಸ್ಕರನ್ ಚಾಲಿಂಗಲ್ ಟೋಲ್ ಹೋರಾಟ ಸಂಘದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net