ಅವೈಜ್ಞಾನಿಕ ಸ್ಕೈವಾಕ್‌ಗೆ ವಿರೋಧ!

ತೆಂಕ ಎರ್ಮಾಳಿನಲ್ಲಿ ನಿರ್ಮಾಣ ಹಂತದಲ್ಲಿರುವ ಅವೈಜ್ಞಾನಿಕ ಸ್ಕೈವಾಕ್ ಕಾಮಗಾರಿ.
ತೆಂಕ ಎರ್ಮಾಳಿನಲ್ಲಿ ನಿರ್ಮಾಣ ಹಂತದಲ್ಲಿರುವ ಅವೈಜ್ಞಾನಿಕ ಸ್ಕೈವಾಕ್ ಕಾಮಗಾರಿ.
Published on
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬೆರಳೆಣಿಕೆ ಜನರು ಸಾಗುವ ಸ್ಥಳಕ್ಕೆ ಅನಗತ್ಯ ಮೇಲ್ಸೇತುವೆ(ಸ್ಕೈವಾಕ್) ನಿರ್ಮಾಣ ಮಾಡುತ್ತಿರುವ ಹೆದ್ದಾರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಗೆ ತೆಂಕ ಎರ್ಮಾಳು ಗ್ರಾಮಸ್ಥರಿಂದ ಇದೀಗ ವಿರೋಧ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳು ಗ್ರಾ.ಪಂ. ಮುಂಭಾಗದಲ್ಲಿ ಹೆದ್ದಾರಿ ಇಲಾಖೆಯಿಂದ ಮಂಜೂರಾಗಿರುವ ಸ್ಕೈವಾಕ್ ಕಾಮಗಾರಿ ಪ್ರಗತಿಯಲ್ಲಿದೆ. ತೆಂಕ ಗ್ರಾಮದಲ್ಲಿ ಆರಂಭದಿಂದಲೇ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಹಲವು ವರ್ಷಗಳಿಂದಲೇ ಗ್ರಾಮಸ್ಥರಿಂದ ಸಾಕಷ್ಟು ಬೇಡಿಕೆ ವ್ಯಕ್ತವಾಗಿತ್ತು. ಗ್ರಾಮಸ್ಥರ ಈ ಬೇಡಿಕೆಗೆ ವಿರುದ್ಧವಾಗಿ ಏಕಾಏಕಿ ಹೆದ್ದಾರಿ ಇಲಾಖೆ ಇಲ್ಲಿಗೇ ಸ್ಕೈವಾಕ್ ಮಂಜೂರು ಮಾಡಿತ್ತು.
ಈ ಯೋಜನೆ ಬಗ್ಗೆ ಆರಂಭದಿಂದಲೂ ಗ್ರಾಮಸ್ಥರು, ತೆಂಕ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು, ಆಟೋ ರಿಕ್ಷಾ ಸಂಘಟನೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಎರ್ಮಾಳಿಗೆ ಭೇಟಿ ನೀಡಿದ್ದ ವೇಳೆ ಶಾಸಕರು ಕೂಡಾ ಕಾಮಗಾರಿ ಸ್ಥಳಾಂತರಿಸುವಂತೆ ಸಂಸದರ ಗಮನಕ್ಕೆ ತಂದಿದ್ದರು. ವಾಸ್ತವಾಂಶ ತಿಳಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಈ ಕಾಮಗಾರಿಯನ್ನು ಬೇರೆಡೆ ಸ್ಥಳಾಂತರಿಸುವುದಾಗಿಯೂ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗೂ ಕಾಮಗಾರಿ ಸ್ಥಗಿತಗೊಳಿಸುವಂತೆ ಸಂಸದರು ಪತ್ರವನ್ನು ಬರೆದಿದ್ದಾರೆ. ಆದರೂ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಕಾಮಗಾರಿ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇವಲ ನಲ್ವತ್ತು ಮೀಟರ್ ಅಗಲದ ಹೆದ್ದಾರಿಯನ್ನು ದಾಟಲು ಸುಮಾರು 100 ಮೀಟರ್ ಏರಿ 40 ಮೀಟರ್ ರಸ್ತೆದಾಟಿ ಮತ್ತೆ 100 ಮೀಟರ್ ಕೆಳಗಿಳಿಯುವ ದುಃಸ್ಸಾಹಸಕ್ಕೆ ಯಾರು ತಾನೇ ಮುಂದಾದಾರು? ಮೇಲಾಗಿ ಇದು ಜನನಿಬಿಡ ಪ್ರದೇಶವಲ್ಲ. ಯಾವುದೇ ಸ್ಥಳೀಯ ರಸ್ತೆ ಕೂಡುವ ಸ್ಥಳವೂ ಅಲ್ಲ. ವಾಣಿಜ್ಯ ಕೇಂದ್ರಗಳಿಲ್ಲ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಒಟ್ಟು ಸಂಖ್ಯೆ ಮೂವತ್ತನ್ನೂ ಮೀರಿಲ್ಲ. ಪ್ರತಿದಿನ ರಸ್ತೆ ದಾಟುವವರ ಸಂಖ್ಯೆ ಹೆಚ್ಚೆಂದರೆ ಹತ್ತಿಪ್ಪತ್ತೂ ಇರಲಾರದು. ಆದುದರಿಂದ ಇಲ್ಲಿಗೆ ಇದು ಅನುಪಯುಕ್ತ.

— ವೈ.ರಾಮಕೃಷ್ಣ ರಾವ್ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net