ಮೈದಾನದಲ್ಲಿ ತರಗತಿ ಕೊಠಡಿ ನಿರ್ಮಾಣಕ್ಕೆ ವಿರೋಧ

 ವಿವಾದದ ಕೇಂದ್ರಬಿಂದುವಾದ ಮಿಜಾರು ಕೆಪಿಎಸ್ ಶಾಲಾ ಮೈದಾನ.
ವಿವಾದದ ಕೇಂದ್ರಬಿಂದುವಾದ ಮಿಜಾರು ಕೆಪಿಎಸ್ ಶಾಲಾ ಮೈದಾನ.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಡಾರಿನಲ್ಲಿರುವ ಮಿಜಾರು ಕೆಪಿಎಸ್ ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲೆಯ ನಾಲ್ಕು ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಸ್ಥಳೀಯರು ಶನಿವಾರ ವಿರೋಧ ವ್ಯಕ್ತಪಡಿಸಿದರು.
ಮಿಜಾರು ಶಾಲೆ (ಬಂಗಬೆಟ್ಟು ಶಾಲೆ) ಹೆಸರಿನಲ್ಲಿ 2.95 ಎಕರೆ ಜಾಗವಿದ್ದು, ಅದರಲ್ಲಿ 95 ಸೆಂಟ್ಸ್ ಜಾಗವನ್ನು ಮಿಜಾರು ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ನೀಡಲಾಗಿತ್ತು. ಉಳಿದ ಜಾಗವನ್ನು ಶಾಲಾ ಮಕ್ಕಳ ಆಟದ ಮೈದಾನ ಹಾಗೂ ಸಾರ್ವಜನಿಕ ಕ್ರೀಡಾ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ.
ಪ್ರಾಥಮಿಕ ಶಾಲೆಗೆ ಮಂಜೂರಾದ ನಾಲ್ಕು ಕೊಠಡಿಗಳನ್ನು ಆಟದ ಮೈದಾನದ ಒಂದು ಭಾಗದಲ್ಲಿ ನಿರ್ಮಿಸಲು ಕಾಮಗಾರಿ ಆರಂಭಿಸಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಗುದ್ದಲಿಪೂಜೆ ಸಂದರ್ಭದಲ್ಲಿಯೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಸದ್ಯ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಸೂಚನೆಯಂತೆ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಪಂಚಾಯಿತಿ ಮಾಜಿ ಸದಸ್ಯ ದಿವಾಕರ ಶೆಟ್ಟಿ ಮಾಧ್ಯಮದವರೊಂದಿಗೆ ಮಾತನಾಡಿ, ಶಾಲೆ ಹಾಗೂ ಮೈದಾನ ನಿರ್ಮಾಣಕ್ಕೆ ಊರಿನವರ ಕೊಡುಗೆ ಅಪಾರವಾಗಿದೆ. ಈ ಭಾಗದಲ್ಲಿ ಇದೊಂದೇ ಆಟದ ಮೈದಾನವಾಗಿದ್ದು, ಇಲ್ಲಿ ಕಟ್ಟಡ ನಿರ್ಮಾಣವಾದರೆ 700 ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಶಾಲೆಯ ಅಭಿವೃದ್ಧಿಗೆ ವಿರೋಧವಿಲ್ಲ, ಪ್ರೌಢಶಾಲೆಯ ಹಳೆಯ ಕಟ್ಟಡದ ಸ್ಥಳದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ಕೊಠಡಿಗಳನ್ನು ನಿರ್ಮಿಸಬೇಕು ಎಂದರು.
ತಾಪಂ ಮಾಜಿ ಸದಸ್ಯ ಎಂ.ಜಿ.ಮುಹಮ್ಮದ್, ಗ್ರಾ.ಪಂ.ಮಾಜಿ ಸದಸ್ಯ ಹರಿಪ್ರಸಾದ್ ಶೆಟ್ಟಿ, ಎಂ.ಎ.ಅಶ್ರಫ್, ಹಫೀಝ್ ತೋಡಾರ್, ಇಸ್ಮಾಯಿಲ್, ರಿಝ್ವನ್ ಸಹಿತ ಸ್ಥಳೀಯರು ಸ್ಥಳದಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net