ಆರೋಗ್ಯ ಇಲಾಖೆ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಆನಂದ್ ಜತ್ತನ್ ಯು. ಮಾತನಾಡಿ, ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧ ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶೀಘ್ರದಲ್ಲಿ ತಿದ್ದುಪಡಿ ಮಾಡಬೇಕು. ಇಲಾಖೆಯ ಎಲ್ಲ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕು. ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ಕೂಡಲೇ ಮುಂಬಡ್ತಿ ನೀಡುವುದು, ನಿಯಮ ಪ್ರಕಾರ ಸೇವಾನಿರತ ವೈದ್ಯರು, ಅಧಿಕಾರಿ-ನೌಕರರ ಉನ್ನತ ವ್ಯಾಸಂಗ ಹಾಗೂ ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡುವುದು, ಕೇಂದ್ರ ಪುರಸತ ಯೋಜನೆಯಡಿ ಕಾರ್ಯನಿರತ ಸುಮಾರು 6000 ಅಧಿಕಾರಿ-, ನೌಕರರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ನೀಡಬೇಕು ಮುಂತಾದ 12 ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಇಲಾಖೆಯ ವಿವಿಧ ವೃಂದಗಳ ಕೇಂದ್ರ ಸಂಘವು ಹಲವಾರು ಬಾರಿ ಇಲಾಖೆಯ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಷ್ಕರ ಅನಿವಾರ್ಯವಾಗಲಿದೆ ಎಂದರು.