ಉದ್ಯಮಿಗೆ ಬ್ಲ್ಯಾಕ್​ಮೇಲ್​; ಮಹಿಳೆಯ ಬಂಧನ

ಉಡುಪಿಯಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿಗೆ ಲಕ್ಷಾಂತರ ರೂ. ವಂಚಿಸಿ ಬ್ಲ್ಯಾಕ್​ಮೇಲ್​ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಝೀನತ್​ ಇಬ್ರಾಹಿಂ.
ಉಡುಪಿಯಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿಗೆ ಲಕ್ಷಾಂತರ ರೂ. ವಂಚಿಸಿ ಬ್ಲ್ಯಾಕ್​ಮೇಲ್​ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಝೀನತ್​ ಇಬ್ರಾಹಿಂ.
Published on

* ಅನ್ಯರಿಗೆ ಮೋಸ, ವಂಚನೆ ಆಗಿದ್ದಲ್ಲಿ ಠಾಣೆ ಸಂಪರ್ಕಿಸಲು ಸೂಚನೆ

ಉಡುಪಿ: ಉಡುಪಿಯಲ್ಲಿ ರಿಯಲ್​ ಎಸ್ಟೇಟ್​ ಉದ್ಯಮ ನಡೆಸುತ್ತಿದ್ದ ಉಡುಪಿ ಮೂಲದ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದಲ್ಲದೆ, ನಿನ್ನ ಅಶ್ಲೀಲ ವಿಡಿಯೋಗಳಿವೆ ಎಂದು ನಿರಂತರ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಖತರ್ನಾಕ್​ ಮಹಿಳೆಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಕಾಪು ತಾಲೂಕಿನ ಪಡುಬಿದ್ರೆ ನಡ್ಸಾಲು ಗ್ರಾಮದ ಕಂಚಿನಡ್ಕ ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಮಾಡಿದ್ದ ಅಬ್ದುಲ್​ ಸಲಾಂ ಅವರ ಪತ್ನಿ ಝೀನತ್​ ಇಬ್ರಾಹಿಂ ಬಂಧಿತ ಮಹಿಳೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚುವರಿ ತನಿಖೆಗಾಗಿ 5 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ.

ಘಟನೆ ವಿವರ

ಉಡುಪಿ ಮೂಲದ ವ್ಯಕ್ತಿ ರಿಯಲ್​ ಎಸ್ಟೆಟ್​ ವ್ಯವಹಾರ ಮಾಡಿಕೊಂಡಿದ್ದು, ಈ ಸಮಯದಲ್ಲಿ ಜೀನತ್​ ಇಬ್ರಾಹಿಂ ಎಂಬ ಮಹಿಳೆಯ ಪರಿಚಯವಾಗಿತ್ತು. ಇಬ್ಬರೂ ಸೇರಿ ಉಡುಪಿಯಲ್ಲಿ ರಿಯಲ್​ ಎಸ್ಟೇಟ್​ ಕಚೇರಿ ಪ್ರಾರಂಭಿಸಿದ್ದರು. ಉದ್ಯಮಿಯು ಮಹಿಳೆಯ ಮಾತು ನಂಬಿ ಹೂಡಿಕೆಯ ಉದ್ದೇಸದಿಂದ 70 ಲಕ್ಷ ರೂ. ನೀಡಿದ್ದರು. ಆದರೆ, ಆ ಹಣವನ್ನು ಜಮೀನು ಖರೀದಿಗೆ ಬಳಸದೆ ತನ್ನ ಸ್ವಂತಕ್ಕಾಗಿ ಬಳಿಸಿಕೊಂಡು ಮೋಸ ಮಾಡಿದ್ದಳು. 

ರಹಸ್ಯ ಕಡತ ಪತ್ತೆ

ಮಹಿಳೆಯ ವಂಚನೆಯಿಂದಾಗಿ ಹಾಗೂ ಆರ್ಥಿಕ ನಷ್ಟದಿಂದಾಗಿ ಕಂಗಾಲಾಗಿದ್ದ ಆ ಉದ್ಯಮಿಯು ತನ್ನ ಕಚೇರಿಯನ್ನು ಮುಚ್ಚುವ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ರಹಸ್ಯ ಕಡತ ಮತ್ತು ಪೆನ್​ಡ್ರೈವ್​ ಲಭಿಸಿತ್ತು. ಅದರಲ್ಲಿ ಹಲವಾರು ಪ್ರಭಾವಿ ಗಣ್ಯವ್ಯಕ್ತಿಗಳ ಖಾಸಗಿ ಮತ್ತು ಅಶ್ಲೀಲ ಛಾಯಾಚಿತ್ರ ಹಾಗೂ ವಿಡಿಯೋಗಳು ಇದ್ದವು. ಇದನ್ನು ಕಂಡ ಉದ್ಯಮಿಗೆ ತನಗೂ ಮೋಸ ಆಗಿದೆ ಎಂದು ತಿಳಿದು ವಂಚನೆ ಮಾಡಿದ ಮಹಿಳೆಯಲ್ಲಿ  ತಾನು ನೀಡಿದ 70 ಲಕ್ಷ ರೂ. ಹಣ ಮರಳಿ ನೀಡುವಂತೆ ಕೇಳಿದ್ದರು.

ಅತ್ಯಾಚಾರದ ಸುಳ್ಳು ಬೆದರಿಕೆ

ಹೂಡಿಕೆ ಮಾಡಿದ್ದ ಹಣ ಮರಳಿ ನೀಡುವಂತೆ ತಿಳಿಸಿದ್ದರಿಂದ ಉದ್ಯಮಿ ತೆರೆದಿದ್ದ ಹೊಸ ಕಚೇರಿಗೆ ಬಂದ ಮಹಿಳೆಯು, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಳು. ಹಣ ನೀಡದಿದ್ದರೆ ನಿನ್ನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದಳು. ನನ್ನ ಬಳಿ ನಿನ್ನ ಅಶ್ಲೀಲ ವಿಡಿಯೋಗಳಿವೆ. ಹಣ ನೀಡದಿದ್ದರೆ ಬಹಿರಂಗ ಮಾಡುತ್ತೇನೆ ಎಂದು ನಿರಂತರ ಬ್ಲ್ಯಾಕ್​ಮೇಲ್​ ಮಾಡತೊಡಗಿದ್ದಳು. ಹೆಂಡತಿ, ಮಕ್ಕಳನ್ನು ಕಿಡ್ನಾಪ್​ ಮಾಡಿ ತುಂಡುತುಂಡು ಮಾಡಿ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆಯನ್ನೂ ಹಾಕಿದ್ದಾಳೆ. ಸಬೀನಾ ಇಲಿಯಾಸ್​ ಹಾಗೂ ಇತರರು ಈ ಮಹಿಳೆಯೊಂದಿಗೆ ಸೇರಿ ಬ್ಲ್ಯಾಕ್​ಮೇಲ್​ ಮಾಡಿ ಅಕ್ರಮವಾಗಿ ಹಣ ವಸೂಲಿ ಮಾಡುವ ದಂಧೆ ನಡೆಸುತ್ತಿದ್ದಾರೆ. ನನಗೆ ಅನ್ಯಾಯ ಮಾಡಿದ್ದಾಳೆ ಎಂದು ರಿಯಲ್​ ಎಸ್ಟೇಟ್​ ಉದ್ಯಮಿ ದೂರು ನೀಡಿದ್ದು, ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
"

ವಂಚನೆ ಹಾಗೂ ಬ್ಲ್ಯಾಕ್​ಮೇಲ್​​ ಪ್ರಕರಣದ ಆರೋಪಿತರ ಪತ್ತೆಗಾಗಿ ಪಿಎಸ್​ಐ ಭರತೇಶ್​ ಕಂಕನವಾಡಿ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡವು ಝೀನತ್​ ಇಬ್ರಾಹಿಂ ಎಂಬ ಮಹಿಳೆಯನ್ನು ಬಂಧಿಸಿದೆ. ಆರೋಪಿಗಳಿಂದ ಬೇರೆ ಯಾರಿಗಾದರೂ ಮೋಸ ಅಥವಾ ವಂಚನೆ ಆಗಿದ್ದಲ್ಲಿ ಉಡುಪಿ ನಗರ ಪೊಲೀಸ್​ ಠಾಣೆ ಸಂಪರ್ಕಿಸಿ ಮಾಹಿತಿ ನೀಡಬಹುದು.

— ಹರಿರಾಂ ಶಂಕರ್​. ಜಿಲ್ಲಾ ಪೊಲೀಸ್​ ವರಿಷ್ಠ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net