ಸುಬ್ರಹ್ಮಣ್ಯ: ಸ್ಪರ್ಧಾಳುಗಳಲ್ಲಿ ಸ್ಫೂರ್ತಿ ತುಂಬುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಸಾಮಾನ್ಯ ಜ್ಞಾನದ ಜತೆಗೆ ದೈಹಿಕ ಸಾಮರ್ಥ್ಯ, ಶಿಸ್ತು ಅಗತ್ಯ. ಶ್ರಮ ತುಂಬಿದ ನಿರಂತರ ಅಭ್ಯಾಸ ಅವಶ್ಯಕವಾಗಿದೆ. ಇಂಥ ಪರೀಕ್ಷೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ವೇದಿಕೆಯಾಗುತ್ತದೆ. ಇಂಥ ವೇದಿಕೆಗಳು ಸ್ಪರ್ಧಿಗಳಲ್ಲಿ ಹುಮ್ಮಸ್ಸನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದರು.
ಸುಬ್ರಹ್ಮಣ್ಯ ಪೊಲೀಸ್ ಠಾಣೆ ನೇತೃತ್ವದಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಹಕಾರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ನಾಗರಿಕ ಪೊಲೀಸ್ ಹುದ್ದೆಗೆ ಅರ್ಜಿ ಹಾಕಿದವರ ಪೂರ್ವ ತಯಾರಿಗಾಗಿ ನಡೆದ ಸಾಮಾನ್ಯ ಜ್ಞಾನ ಪರೀಕ್ಷೆ ಉದ್ಘಾಟಿಸಿ ಮಾತನಾಡಿದರು.
400ಕ್ಕೂ ಅಧಿಕ ಅಭ್ಯರ್ಥಿಗಳು ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದರು. ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಯುವಕ ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾದರು. ಪರೀಕ್ಷಾ ವಿಜೇತರಿಗೆ ಆಕರ್ಷಕ ನಗದು ಬಹುಮಾನ, ಪ್ರೋತ್ಸಾಹಕ ಬಹುಮಾನ ದೊರೆಯಲಿದೆ. ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸುಬ್ರಹ್ಮಣ್ಯ ಪೊಲೀಸ್ ಇಲಾಖೆ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಆಡಳಿತ ಮಂಡಳಿ ಶ್ರಮವಹಿಸಿತು. ಪೊಲೀಸ್ ಸಿಬ್ಬಂದಿ, ಸಂಸ್ಥೆ ಅಧ್ಯಾಪಕರು, ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ಸಹಕರಿಸಿದರು.