ವೀರವನಿತೆ ಒನಕೆ ಓಬವ್ವ ನಾರಿ ಶಕ್ತಿಯ ಪ್ರತೀಕ

ವೀರವನಿತೆ ಒನಕೆ ಓಬವ್ವ ನಾರಿ ಶಕ್ತಿಯ ಪ್ರತೀಕ
Published on: 

ಉಡುಪಿ: ವೀರ ವನಿತೆ ಓಬವ್ವ ಕಿಚ್ಚು, ಧೈರ್ಯ, ಸಾಹಸಕ್ಕೆ ಹೆಸರುವಾಸಿಯಾಗಿದ್ದು, ಶತ್ರುಗಳ ದಾಳಿಯಿಂದ ಚಿತ್ರದುರ್ಗ ಕೋಟೆಯನ್ನು ರಕ್ಷಿಸುವ ಮೂಲಕ ನಾರೀ ಶಕ್ತಿಯ ಪ್ರತಿಕವಾಗಿದ್ದಾರೆ. ಮಹಿಳೆಯರಿಗೆ ಪ್ರೇರಣೆಯಾಗಿ ಇಂದಿಗೂ ಚಿರಸ್ಥಾಯಿಯಾಗಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ, ಓಬವ್ವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಸಮೃದ್ಧವಾದ ನಾಡನ್ನು ಕಟ್ಟುವಲ್ಲಿ ಅನೇಕ ಮಹನೀಯರು, ಮಹಿಳೆಯರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅಂತಹ ಮಹಿಳೆಯರಲ್ಲಿ ಒಬವ್ವ ಕೂಡ ಒಬ್ಬರು. ಅವರ ಸಾಹಸಗಾಥೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅವರ ಈ ತ್ಯಾಗ, ಸಾಹಸ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಯ ಜೊತೆಗೆ ದೇಶ ರಕ್ಷಣೆಯನ್ನು ಮಾಡಬಹುದು ಎನ್ನುವುದು ಓಬವ್ವ ಸೇರಿದಂತೆ ಅನೇಕ ವೀರ ಮಹಿಳೆಯರ ಯಶೋಗಾಥೆಯಿಂದ ತಿಳಿಯಬಹುದು. ಅವರ ಸಮರ್ಪಣಾ ಭಾವ ಪ್ರತಿಯೊಬ್ಬರಿಗೂ ಮಾದರಿ. ಪ್ರತಿ ಪೋಷಕರ ತಮ್ಮ ಮಕ್ಕಳಿಗೆ ದೈಹಿಕ ಕಸರತ್ತನ್ನು ಕಲಿಸಬೇಕು ಎಂದರು.

ನಿವೃತ್ತ ಕನ್ನಡ ಉಪನ್ಯಾಸಕಿ ನಳಿನಾದೇವಿ ಎಂ.ಆರ್​ ಮಾತನಾಡಿ, ಓಬವ್ವ ಯುದ್ಧಕಲೆಯ ಆಳ, ಅಗಲದ ಅರಿವಿಲ್ಲದೆ ಇದ್ದರೂ ತನ್ನ ನಾಡಿನ ರಕ್ಷಣೆ ಮಾಡಬೇಕೆಂಬ ಕಿಚ್ಚು ಅವರಲ್ಲಿತ್ತು. ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಊಟ ಮಾಡುತ್ತಿರುವ ಗಂಡನನ್ನು ಎಬ್ಬಿಸದೇ, ಶತ್ರು ಸೈನ್ಯವನ್ನು ಕೇವಲ ಒನಕೆಯಿಂದ ಸದೆ ಬಡಿದು, ಕೆಚ್ಚೆದೆಯಿಂದ ಹೋರಾಡಿ ವೀರ ಮರಣವನ್ನಪ್ಪಿದ ಧೀರ ಮಹಿಳೆ. ಆಕೆಯ ಅಪ್ರತಿಮ ಸಾಹಸ, ಧೈರ್ಯ, ಸಮಯಪ್ರಜ್ಞೆ ಸ್ತ್ರೀ ಶಕ್ತಿಯ ಪ್ರತಿಕವಾಗಿದ್ದು, ಅವರ ತೇಜಸ್ಸು ಪ್ರತಿಯೊಬ್ಬರಲ್ಲೂ ಉದ್ದೀಪನಗೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್​.ಎಸ್​ ಕಾದ್ರೋಳ್ಳಿ, ಉಪತಹಶೀಲ್ದಾರ್​ ನವನೀತ್​ ಮತ್ತಿತರರು ಉಪಸ್ಥಿತರಿದ್ದರು. ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್​ ನಿರೂಪಿಸಿ ವಂದಿಸಿದರು.