ನಕಲಿ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರ ನೀಡಿದರೆ ಅಧಿಕಾರಿಗಳೇ ಹೊಣೆ

ಸಂಸದ ಕೋಟ ಶ್ರೀನಿವಾಸ ಪೂಜಾರಿ
ಸಂಸದ ಕೋಟ ಶ್ರೀನಿವಾಸ ಪೂಜಾರಿ
Published on
ಉಡುಪಿ: ರಾಜ್ಯದಲ್ಲಿ ಎಸ್​ ಐ ಆರ್​ ಆರಂಭವಾಗಿದ್ದು, ರಾಜ್ಯ ಸರ್ಕಾರ ಅಧಿಕೃತ ವಾಸ್ತವ್ಯ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆ ಮೂಲಕ ನೀಡಲು ಮುಂದಾಗಿದೆ. ಪೂರ್ವಾಪರ ಯೋಚಿಸದೆ ನಕಲಿಮತದಾರರಿಗೆ ವಾಸ್ತವ್ಯ ದೃಢೀಕರಣ ನೀಡಿರುವುದು ಸಾಬೀತಾದರೆ ಅಧಿಕಾರಿಗಳು ಹೊಣೆಯಾಗುತ್ತಾರೆ. ಹೀಗಾಗಿ ಎಸ್​ಐಆರ್​ ವಿಚಾರದಲ್ಲಿ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಬಾರದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.
ಬಾಂಗ್ಲಾದ ಜನ ಭಾರತಕ್ಕೆ ಬಂದು ಮತದಾನ ಮಾಡಬಾರದು. ಈ ಕೆಟ್ಟ ಪರಂಪರೆಗೆ ಎಸ್​ಐಆರ್​ ವಿದಾಯ ಹೇಳುತ್ತದೆ. ಎಸ್​ಐಆರ್​ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ವ್ಯವಸ್ಥೆ. ಕಾಂಗ್ರೆಸ್​ ಪಕ್ಷ ಕೂಡ ಗೊಂದಲಕ್ಕೆ ಅವಕಾಶ ಕೊಡಬಾರದು. ಹತ್ತಕ್ಕೂ ಹೆಚ್ಚು ದಾಖಲೆಗಳನ್ನು ನೀಡಲು ಅವಕಾಶ ಇದೆ. ಒಂದು ವೇಳೆ ವಾಸ್ತವ್ಯ ದೃಢೀಕರಣ ಪತ್ರ ನಕಲಿ ಎಂದು ಸಾಬೀತಾದರೆ ಅದಕ್ಕೆ ಕಾರಣರಾದ ಹಾಗೂ ಸಹಿ ಹಾಕಿದ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಯೋಜಿಸುತ್ತಿದ್ದೇವೆ. ನಿಷ್ಪಕ್ಷಪಾತವಾಗಿ ಪರಿಷ್ಕರಣೆ ನಡೆಯಬೇಕು ಎಂದರು.
ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಬಾಂಗ್ಲಾ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಪತ್ರಗಳನ್ನು ಬಳಸಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳುವ ಪ್ರಯತ್ನಗಳು ನಡೆದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಪ್ರದಿಪ್​ ಈಶ್ವರ್​ ಕುಮಾರಸ್ವಾಮಿ ಕಚ್ಚಾಟ ವಿಚಾರ
ಆಡಳಿತ ಪಕ್ಷದ ಶಾಸಕ ಪ್ರಚೋದನೆ ನೀಡುವುದು ಸರಿಯಲ್ಲ. ಕಾರು ಮೇಲೆ ನಿಂತು ತೊಡೆ ತಟ್ಟಿ ಭುಜ ತಟ್ಟಿ ಪ್ರಚೋದಿಸುವುದು ಸರಿಯಲ್ಲ. ಇದಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಉತ್ತರ ನೀಡಬೇಕು. ಗುಂಡಾಗಿರಿ ನಿಯಂತ್ರಣ ಮಾಡಬೇಕು. ಶಾಸಕರನ್ನು ಕರೆದು ಬುದ್ಧಿ ಹೇಳಬೇಕು. ಸ್ವಯಂ ಪ್ರೇರಿತರಾಗಿ ಬಿಜೆಪಿ ಮತ್ತು ಜೆಡಿಎಸ್​ ಕಾರ್ಯಕರ್ತರ ಮೇಲೆ ಕೇಸ್​ ಹಾಕಲಾಗಿದೆ. ಆದರೆ ಪ್ರಚೋದನೆ ಕೊಟ್ಟವರ ಮೇಲೆ ಪ್ರಕರಣ ದಾಖಲಾಗಿಲ್ಲ ಎಂದು ದೂರಿದರು.
ರಾಮ ಮಂದಿರ ಹುಂಡಿ ಹಗರಣ ವಿಚಾರ
ರಾಮಮಂದಿರ ಹಿಂದುಗಳ ಶ್ರೇಷ್ಠ ಸ್ಥಳ. ಆರ್ಥಿಕ ಶಕ್ತಿ ಹರಿದು ಬರುತ್ತಿದೆ. ರಾಮಮಂದಿರದಲ್ಲಿ ಆಗಿರುವುದು ದೇಶಕ್ಕೆ, ಬಿಜೆಪಿಗೆ, ಪರಿವಾರಕ್ಕೂ ನೋವುಂಟು ಮಾಡಿದೆ. ತಕ್ಷಣ ಬಂಧನ ಪ್ರಕ್ರಿಯೆಯಾಗಿದೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.
ಆರ್​ ಎಸ್​ ಎಸ್​ ನೊಂದಣಿ ಬಗ್ಗೆ ತಲೆಬಿಸಿ ಬೇಡ
ಪ್ರಿಯಾಂಕ ರ್ಖಗೆ ಹುಟ್ಟುವ ಮುಂಚೆಯೇ ಶತಮಾನದ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಕೇವಲ ಜನಪರ ರಾಷ್ಟ್ರಪ್ರೇಮದ ಪ್ರತಿಕವಾಗಿ ಕೆಲಸ ಮಾಡುತ್ತಿದೆ. ಪ್ರಿಯಾಂಕ ರ್ಖಗೆ ಅವರ ಕಾಲದಲ್ಲೇ ನೋಂದಣಿ ಆಗಬೇಕೆಂದು ಶಾಸನ ಇದೆಯೇ ಎಂದು ಪ್ರಶ್ನಿಸಿದರು. ಗಣರಾಜ್ಯೋತ್ಸವ ಪಥ ಸಂಚನದಲ್ಲಿ ಸಮವಸ್ತ್ರ ಸಹಿತ ಭಾಗವಹಿಸಿದೆ. ನೆಹರು ಅವರಿಂದ ಮೆಚ್ಚುಗೆ ಪಡೆದಿದೆ. ಇದನ್ನು ಪ್ರಿಯಾಂಕ ರ್ಖಗೆ ಮರೆತಿದ್ದಾರೆ. ಆರ್​ ಎಸ್​ ಎಸ್​ ನೋಂದಣಿ ಬಗ್ಗೆ ನಿಮಗೆ ತಲೆಬಿಸಿ ಬೇಡ ಎಂದು ಕಿಚಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net