

ವಿಜಯವಾಣಿ ಸುದ್ದಿಜಾಲ ಕುಂದಾಪುರ
ತ್ರಾಸಿ ಅಂಬೇಡ್ಕರ್ ಸಭಾಭವನದಲ್ಲಿ ಮಂಗಳವಾರ ತ್ರಾಸಿ ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳ ಗೈರು ವಿಚಾರವನ್ನು ಪ್ರಸ್ತಾಪಿಸಿದ ಮೊವಾಡಿ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ಈವರೆಗೆ ಯಾವುದೇ ಗ್ರಾಮಸಭೆಗೆ ಭಾಗವಹಿಸಿಲ್ಲ. ಅರಣ್ಯ ಇಲಾಖೆಗೆ ಸಂಬಂಧಪಟ್ಟ ಬಹಳಷ್ಟು ವಿಚಾರಗಳು ಚರ್ಚಿಸಲು ಇರುವ ಕಾರಣ ಅವರಿಗೆ ನೋಟಿಸ್ ನೀಡಿ ಮುಂದಿನ ಗ್ರಾಮಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಕುಂದಾಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ರೇಖಾ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಪಂ ಆಡಳಿತ ಅಧಿಕಾರಿ ಸತ್ಯನಾರಾಯಣ ಬಾಡ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆ ಸಹಾಯಕ ಉಪನಿರೀಕ್ಷಕ ಆನಂದ, ಮೆಸ್ಕಾಂ ಗಂಗೊಳ್ಳಿ ಶಾಖೆಯ ಜೆಇ ದಿನೇಶ ಶೆಟ್ಟಿ, ಗುಜ್ಜಾಡಿ ಪಶು ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ಅರುಣ್ ಕೆ.ಪಿ., ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ದೀಪಾ, ಗ್ರಾಮ ಆಡಳಿತ ಅಧಿಕಾರಿ ಅನಿಲ್ ಮೇತ್ರಿ ಮಾಹಿತಿ ನೀಡಿದರು. ಕುಂದಾಪುರ ತಾಪಂ ವಸತಿ ನಿವೇಶನದ ನೋಡೆಲ್ ಅಧಿಕಾರಿ ಭೋಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪಿಡಿಒ ಶೋಭಾ ಕಾರ್ಯಕ್ರಮ ನಿರ್ವಹಿಸಿದರು. ಎಸ್ಡಿಎ ಶಿವಾನಂದ ಅನುಪಾಲನಾ ವರದಿ ಮತ್ತು ವಾರ್ಡ್ ಸಭೆ ನಡಾವಳಿಗಳನ್ನು ವಾಚಿಸಿದರು.
ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಯಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ. ರಾತ್ರಿ ವೇಳೆ ವಿದ್ಯುತ್ ಕಡಿತವಾದರೆ ಸರಿಪಡಿಸಲು ಸಿಬ್ಬಂದಿಯಿಲ್ಲ. ಆದ್ದರಿಂದ ಮೆಸ್ಕಾಂ ಗಂಗೊಳ್ಳಿ ಶಾಖೆಗೆ ಸಮರ್ಪಕ ಸಿಬ್ಬಂದಿ ನೇಮಕಾತಿ ಮಾಡಬೇಕು. ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರವನ್ನು 24x7 ಕೇಂದ್ರವನ್ನಾಗಿ ಮಾಡಬೇಕು. ಮೊವಾಡಿ ಎಸ್ಸಿ ಕಾಲನಿಯ ವಿದ್ಯುತ್ ಪರಿವರ್ತಕವನ್ನು ಮೇಲ್ದರ್ಜೆಗೇರಿಸಬೇಕು ಎಂಬ ಒತ್ತಾಯ ಕೇಳಿಬಂತು.
ತ್ರಾಸಿ ಗ್ರಾಮದ ಶಾಲೆಗಳ ವಠಾರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಆಡಲು, ಊಟ ಮಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಬೀದಿನಾಯಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ತ್ರಾಸಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಹೇಮಾ ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಜಿಪಂ ಮಾಜಿ ಸದಸ್ಯ ಅನಂತ ಮೊವಾಡಿ, ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಸರಿಯಾದ ವಾದ ಮಂಡಿಸದೆ ಇರುವುದರಿಂದ ಈ ಪರಿಸ್ಥಿತಿ ಉದ್ಭವವಾಗಿದೆ. ಬೀದಿ ನಾಯಿಗಳನ್ನು ಹಿಡಿದು ಹಾಕಲು ಶೆಡ್ ನಿರ್ಮಿಸುವುದಾದರೆ ಮೊವಾಡಿಯಲ್ಲಿ ಜಾಗ ಇದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು ಹಾಗೂ ಸಾರ್ವಜನಿಕರನ್ನು ರಕ್ಷಿಸಿ ಎಂದು ಒತ್ತಾಯಿಸಿದರು.
ತ್ರಾಸಿ ಬಸ್ ನಿಲ್ದಾಣದಿಂದ ಅಣ್ಣಪ್ಪಯ್ಯ ಸಭಾಭವನದವರೆಗೆ ಮೀನು ಲಾರಿಗಳು ಕಲುಷಿತ ನೀರನ್ನು ರಸ್ತೆಗೆ ಚೆಲ್ಲುತ್ತಿದ್ದು, ಪರಿಸರದಲ್ಲಿ ಗಬ್ಬು ವಾಸನೆ ಹರಡಿದೆ. ಲಾರಿಗಳ ಬಾಗಿಲು ತೆರೆದಿಡುತ್ತಿರುವುದರಿಂದ ವಾಸನೆ ಹಬ್ಬುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದರು. ಮೊವಾಡಿಯಲ್ಲಿ ಸಾಕಷ್ಟು ನಿವೇಶನಗಳಿದ್ದು, ಫಲಾನುಭವಿಗಳೂ ಇದ್ದಾರೆ. ಹೀಗಾಗಿ ಫಲಾನುಭವಿಗಳಿಗೆ ಕನಿಷ್ಠ 10 ಸೆಂಟ್ಸ್ ನಿವೇಶನವನ್ನು ಮಂಜೂರು ಮಾಡಬೇಕು ಎಂಬ ಒತ್ತಾಯ ಕೇಳಿಬಂತು.