ಆಪ್ರಾಪ್ತ ಬಾಲಕಿಯೊಂದಿಗೆ ನಗ್ನ ವಿಡಿಯೋ ಚಿತ್ರೀಕರಣ

Crime
Crime
Published on
ಕಾಸರಗೋಡು: ಯುವಕನನ್ನು ಅಪಹರಿಸಿ ಬಾಲಕಿ ಜತೆ ಅರೆನಗ್ನವಾಗಿ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿ, 1.02 ಲಕ್ಷ ರೂ. ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಐವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ದ.ಕ. ಜಿಲ್ಲೆಯ ವಿಟ್ಲ ಸೇರಾಜೆ ನಿವಾಸಿ ಎ.ಎಸ್.ಸುಜಿತ್ ದೂರು ನೀಡಿದ್ದಾರೆ. ಆ.29ರಂದು ತನ್ನನ್ನು ಕಾರಿನಲ್ಲಿ ಅಪಹರಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಆಪ್ರಾಪ್ತ ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿ 1,02,000 ರೂ. ದೋಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ.

ಚಿಕಿತ್ಸೆಗೆ ಸಹಾಯ ಕೇಳಿದ ಚಾಲಕನಿಗೆ ಹಲ್ಲೆ

ಕಾಸರಗೋಡು: ಅನಾರೋಗ್ಯದಿಂದ ಬಳಲುತ್ತಿರುವ ಆಟೋ ಚಾಲಕರೊಬ್ಬರ ಚಿಕಿತ್ಸೆಗೆ ನೆರವು ಕೋರಿದ್ದಕ್ಕೆ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬನತ್ತಡ್ಕ ನಿವಾಸಿ ಜಮಾಲ್ ಎಂಬಾತನ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಾಡೂರು ಅಂಗಡಿಮೊಗರು ಫೌಸಿಯಾ ಮಂಜಿಲ್ ನಿವಾಸಿ, ಆಟೋ ಚಾಲಕ ಅಬ್ದುಲ್ ರಹ್ಮಾನ್ ಎಲ್.ಎಂ.(72) ದೂರು ನೀಡಿದ್ದಾರೆ. ಅಸೌಖ್ಯದಿಂದ ಬಳಲುತ್ತಿದ್ದ ಮೊಯ್ದೀನ್ ಎಂಬ ಆಟೋ ಚಾಲಕನಿಗೆ ನೆರವು ನೀಡುವಂತೆ ವಾಟ್ಸ್‌ಆ್ಯಪ್ ಮೂಲಕ ನೆರವು ಕೇಳಿದ ದ್ವೇಷದಿಂದ ಹಲ್ಲೆ ನಡೆಸಿರುವುದಾಗಿ ಅಬ್ದುಲ್ ರಹ್ಮಾನ್ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಅಸೌಖ್ಯ ಸ್ಥಿತಿಯಲ್ಲಿದ್ದ ವೃದ್ಧ ಮೃತ್ಯು

ಕಾಸರಗೋಡು: ಮನೆಯಲ್ಲಿ ಅಸೌಖ್ಯದಿಂದ ಮಲಗಿದ ಸ್ಥಿತಿಯಲಿದ್ದ ಕೊಯಿಪ್ಪಾಡಿ ಸಿದ್ದಿಬೈಲು ನಿವಾಸಿ ಪವನೇಶ್(64) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸೋಮವಾರ ಪವನೇಶ್ ಮನೆ ಕೊಠಡಿಯೊಳಗೆ ಒರಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ತಕ್ಷಣ ಅವರನ್ನು ನೆರೆಮನೆಯವರು ಸೇರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಕುಂಬಳೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಕಂಟೈನರ್‌ಗೆ ಬೆಂಕಿ

ಕಾಸರಗೋಡು: ಹೊಸದುರ್ಗ ಬೇಕಲ ಮವ್ವಲ್‌ನಲ್ಲಿ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಕಂಟೈನರ್ ಲಾರಿಗೆ ಬೆಂಕಿ ತಗುಲಿ ಭಾಗಶಃ ಭಸ್ಮವಾಗಿದ್ದು ನಷ್ಟ ಸಂಭವಿಸಿದೆ. ಉಡುಪಿಯಿಂದ ಕೊಚ್ಚಿಗೆ ಫ್ರಿಡ್ಜ್ ಸಾಗುತ್ತಿದ್ದ ಕಂಟೈನರ್ ಲಾರಿಗೆ ಬೆಂಕಿ ತಗುಲಿದೆ. ಬೇಕಲ ರೈಲ್ವೆ ಮೇಲ್ಸೇತುವೆಯಲ್ಲಿ ಕಾಮಗಾರಿ ಹಿನ್ನೆಲೆ ಮವ್ವಲ್ ಹಾದಿಯಾಗಿ ಕಂಟೈನರ್ ಲಾರಿ ಸಂಚರಿಸುತ್ತಿದ್ದಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿ ಬೆಂಕಿ ತಗುಲಿದೆ. ಮಾಹಿತಿ ತಿಳಿದು ಕಾಸರಗೋಡು ಹಾಗೂ ಕಾಞಂಗಾಡ್‌ನಿಂದ ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net