ಎನ್​ ಟಿ ಎ ಕೋಚಿಂಗ್​ ಮಾಫಿಯಾ ಕೈಗೊಂಬೆ: ಸೌರಭ್​ ಬಲ್ಲಾಳ್

ಎನ್​ಎಸ್​ಯುಐ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್​ ಬಲ್ಲಾಳ್​ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಎನ್​ಎಸ್​ಯುಐ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್​ ಬಲ್ಲಾಳ್​ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
Published on
ಉಡುಪಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭಾರೀ ಅಕ್ರಮಗಳಿಂದಾಗಿ ನೀಟ್​-ಯುಜಿ ಪರೀಕ್ಷೆ ರದ್ದಾಗಲು ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ. ಎನ್​ ಟಿ ಎ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಪದೇ ಪದೇ ವಿಫಲವಾಗಿದ್ದು, ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕೋಚಿಂಗ್​ ಮಾಫಿಯಾದ ಕೈಗೊಂಬೆಯಾಗಿರುವ ಎನ್​ ಟಿ ಎ ತಕ್ಷಣ ವಿಸರ್ಜಿಸಬೇಕು ಎಂದು ಎನ್​ಎಸ್​ಯುಐ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್​ ಬಲ್ಲಾಳ್​ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 3 ವರ್ಷದಲ್ಲಿ 2ನೇ ಬಾರಿ ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳನ್ನು ಕೋಚಿಂಗ್​ ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಹರಾಜು ಹಾಕಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು 2 ವರ್ಷ ತಯಾರಿ ನಡೆಸಿ, ಕೋಚಿಂಗ್​ಗೆ ಲಕ್ಷಾಂತರ ರೂ. ಖರ್ಚು ಮಾಡಿ ಈಗ ತೀವ್ರ ಮಾನಸಿಕ ಆಘಾತ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ತಪ್ಪಿಲ್ಲದೆ ಮರು- ಪರೀಕ್ಷೆ ಅನ್ಯಾಯದ ಶಿಕ್ಷೆಯಾಗಿದೆ. ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ರಕ್ಷಣೆಗೆ ವೈದ್ಯಕಿಯ ಪ್ರವೇಶ ಕರ್ನಾಟಕ ಸಿಇಟಿ ಮೂಲಕವೇ ನಡೆಯಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಸುಪ್ರೀಂ ಕೋರ್ಟ್​ ಮೇಲ್ವಿಚಾರಣೆಯ ನ್ಯಾಯಾಂಗ ಆಯೋಗ ರಚಿಸಬೇಕು. ಕೇಂದ್ರ ಶಿಕ್ಷಣ ಸಚಿವ ಧಮೇಂರ್ದ್ರ ಪ್ರಧಾನ್​ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕರ್ನಾಟಕಕ್ಕೆ ಪ್ರತ್ಯೇಕ ವೈದ್ಯಕಿಯ ಪ್ರವೇಶ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ನ್ಯಾಯ ವಿಳಂಬವಾದರೆ ಉಡುಪಿ, ಕುಂದಾಪುರ, ಕಾರ್ಕಳ ಮತ್ತು ಬ್ರಹ್ಮಾವರದಲ್ಲಿ ಜಿಲ್ಲಾವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಎನ್​ಎಸ್​ಯುಐ ಪ್ರಮುಖರಾದ ಶರತ್​ ಕುಂದರ್​, ಅನೀಶ್​ ಕುಮಾರ್​, ಅಧ್ಯಾನ್​ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net