

ಕಾಸರಗೋಡು: ಕಾಞಂಗಾಡು ಅಲಮಿಪಲ್ಲಿ ಪೆಟ್ರೋಲ್ ಪಂಪ್ ಸಮೀಪದ ರಾಜರಾಜೇಶ್ವರಿ ಮೂಕಾಂಬಿಕಾ ದೇವಸ್ಥಾನದಲ್ಲಿ ಕಳವಿಗೆ ಯತ್ನಿಸುತ್ತಿದ್ದ ಬಲಾಲ್ ಮೂಲದ ಕುಖ್ಯಾತ ಕಳ್ಳ ಹರೀಶ್ ಕುಮಾರ್ (53) ಎಂಬಾತನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಬುಧವಾರ ನಸುಕಿನ 2ರ ವೇಳೆಗೆ ಸ್ಥಳೀಯ ನಿವಾಸಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಸೆರೆಹಿಡಿಯಲಾಗಿದೆ.
ದೇವಳದ ಆವರಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಕಳ್ಳನ ಮೇಲೆ ನಿಗಾಯಿರಿಸಿದ್ದ ಸ್ಥಳೀಯರು ಈತನ ಚಲನವಲನ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದರು. ಸಮೀಪದ ಮನೆಯೊಂದರ ಸೌದೆ ಸಂಗ್ರಹಿಸುವ ಸ್ಥಳದಿಂದ ಕೊಡಲಿ ತಂದು, ಆ ಮೂಲಕ ದೇಗುಲದ ಬೀಗ ಒಡೆಯಲು ಪ್ರಯತ್ನಿಸಿದ್ದ ಸಂದರ್ಭ ಸೆರೆ ಹಿಡಿದು ಹೊಸದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆ.