ಹೆದ್ದಾರಿ ಬದಿ ತ್ಯಾಜ್ಯ ರಾಶಿ ತೆರವಿಗೆ ಸೂಚನೆ

ರಾಜೇಶ್ ನಾಕ್
ರಾಜೇಶ್ ನಾಕ್
Published on
ಬಂಟ್ವಾಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಲವು ಕಡೆ ತ್ಯಾಜ್ಯ ರಾಶಿ ಬಿದ್ದಿರುವ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಸಾರ್ವಜನಿಕರು ನಿರಂತರ ದೂರು ನೀಡುತ್ತಿದ್ದರೂ ಈ ಸಮಸ್ಯೆ ಯಾಕೆ ಬಗೆಹರಿದಿಲ್ಲ? ಕೂಡಲೇ ಎಲ್ಲ ತ್ಯಾಜ್ಯವನ್ನು ತೆರವುಗೊಳಿಸಿ, ಇಂತಹ ಪರಿಸ್ಥಿತಿ ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ರಸ್ತೆ ಬದಿಯಲ್ಲಿ ಕಸ ಎಸೆಯುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು. ತ್ಯಾಜ್ಯ ಎಸೆಯುವ ಪ್ರದೇಶಗಳನ್ನು ಗುರುತಿಸಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸಿದರು.
ನೇತ್ರಾವತಿ ನದಿ ಮಾಲಿನ್ಯದ ವಿಚಾರವನ್ನೂ ಗಂಭೀರವಾಗಿ ಪ್ರಸ್ತಾಪಿಸಿದ ಶಾಸಕರು, ಬಂಟ್ವಾಳ ಬಡ್ಡಕಟ್ಟೆ, ಗೂಡಿನಬಳಿ, ತಲಪಾಡಿ ಸೇರಿದಂತೆ ಪುರಸಭಾ ವ್ಯಾಪ್ತಿಯ ಅನೇಕ ವಾಣಿಜ್ಯ ಸಂಕೀರ್ಣಗಳು, ವಸತಿ ಸಮುಚ್ಚಯ, ಹೋಟೆಲ್‌ಗಳು ಹಾಗೂ ವಿವಿಧ ಅಂಗಡಿಗಳಿಂದ ಹೊರಬರುವ ಕೊಳಚೆ ನೀರು ಯಾವುದೇ ಸಂಸ್ಕರಣೆ ಇಲ್ಲದೆ ನೇರವಾಗಿ ನೇತ್ರಾವತಿ ನದಿಗೆ ಸೇರುತ್ತಿದೆ. ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅವರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಮೆಲ್ಕಾರ್‌ನಲ್ಲಿ ಹೆದ್ದಾರಿ ಬದಿಯೇ ಕಸ ಹಾಕುವ ಹಾಗೂ ಸಜೀಪಮುನ್ನೂರು ಗ್ರಾಮದ ಮಾರ್ನಬೈಲಿನಲ್ಲಿ ಸಂಜೀವಿನಿ ಒಕ್ಕೂಟದವರು ಕಸ ಸಂಗ್ರಹಿಸಿದ್ದರೂ ಪಂಚಾಯಿತಿ ಅದನ್ನು ವಿಲೇವಾರಿ ಮಾಡದೆ ಇನ್ನೂ ಅಲ್ಲೇ ಬಿಟ್ಟಿರುವ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಕ್ಯಾಮರಾ ಅಳವಡಿಸಿದ ನಂತರವೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸ ರಾಶಿ ಬಿದ್ದರೆ ಅದು ಅಧಿಕಾರಿಗಳ ವೈಫಲ್ಯವೆಂದು ಪರಿಗಣಿಸಲಾಗುವುದು. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು.

— ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net