ಸುಬ್ರಹ್ಮಣ್ಯದಲ್ಲಿ ಸಮರ್ಪಕ ಆರೋಗ್ಯ ಸೇವೆ ಕುರಿತಂತೆ ಚರ್ಚಿಸಲು ಹೋರಾಟ ಸಮಿತಿ ಸಭೆ ನಡೆಯಿತು. ಪ್ರಮುಖರಾದ ಶಿವರಾಮ ರೈ, ವಿಮಲಾ ರಂಗಯ್ಯ, ರವಿ ಕಕ್ಕೆಪದವು ಮತ್ತಿತರರು ಉಪಸ್ಥಿತರಿದ್ದರು
ಕುಕ್ಕೆ ಸುಬ್ರಹ್ಮಣ್ಯ, ಐನೆಕಿದು ಹಾಗೂ ಯೇನೆಕಲ್ಲು ಭಾಗದ ಜನತೆಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಂತೆ ಆಗ್ರಹಿಸಿ ಜು.10ರಂದು ಬೃಹತ್ ಪ್ರತಿಭಟನೆ ನಡೆಸಲು ಗ್ರಾಮಸ್ಥರು ತೀರ್ವಾನಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯ ಕುಮಾರಧಾರ ಸಭಾಂಗಣದಲ್ಲಿ ಮಂಗಳವಾರ ನಡೆದ ಹೋರಾಟ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಿನ 10 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಕ್ಷಭೇದ ಮರೆತು ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಜು.10ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸುತ್ತಮುತ್ತಲಿನ ಗ್ರಾಮಗಳಿಗೆ, ನೂರಾರು ಭಕ್ತರಿಗೆ ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವೇ ಏಕೈಕ ಆಧಾರವಾಗಿದೆ. ಆದರೆ ಈ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು, ಅಗತ್ಯ ಸಿಬ್ಬಂದಿ ಕೊರತೆ ಇದೆ. 24 ಗಂಟೆಗಳ ತುರ್ತು ಸೇವೆ ಇಲ್ಲದಿರುವುದು ಸೇವೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಂಜೆ 5ರ ಬಳಿಕ ಆಸ್ಪತ್ರೆ ಮುಚ್ಚುವುದರಿಂದ ತುರ್ತು ಸಂದರ್ಭ ರೋಗಿಗಳನ್ನು ದೂರದ ಪುತ್ತೂರು ಅಥವಾ ಮಂಗಳೂರಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ದೂರಿದರು.
24 ತಾಸು ಚಿಕಿತ್ಸೆ ಲಭ್ಯ
ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ವೈದ್ಯಕೀಯ ಉಪಕರಣಗಳು ಲಭ್ಯವಿದ್ದರೂ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದ ಕಾರಣ ಕುಕ್ಕೆ ಸುಬ್ರಹ್ಮಣ್ಯದ ಆರೋಗ್ಯ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರೋಗಿಗಳಿಗೆ 24 ಗಂಟೆಯೂ ಚಿಕಿತ್ಸೆ ನೀಡಲು ಕಾಯಂ ವೈದ್ಯರು ಹಾಗೂ ಸಿಬ್ಬಂದಿ ನೇಮಕಗೊಳ್ಳಬೇಕು ಮತ್ತಿತರ ಬೇಡಿಕೆಯನ್ನು ಸಭೆಯ ಮುಂದಿಡಲಾಯಿತು. ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರೋಗ್ಯ ಕೇಂದ್ರ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದಲೇ ಹೋರಾಟ ನಡೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಎರಡು ತಿಂಗಳ ಹಿಂದೆ, ಅಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದಾಗ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತಕ್ಷಣವೇ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರು. ಆದರೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.