ಆಡಳಿತದ ಆದೇಶಕ್ಕಿಲ್ಲ ಕಿಮ್ಮತ್ತು!

 ಬಾಗಿಲು ಅಳವಡಿಸದ ಬಸ್‌ಗಳಿಗೆ ಕುಂದಾಪುರ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.
ಬಾಗಿಲು ಅಳವಡಿಸದ ಬಸ್‌ಗಳಿಗೆ ಕುಂದಾಪುರ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.
Published on
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಪ್ರಯಾಣಿಕರ ಜೀವಭದ್ರತೆಯ ಹಿತದೃಷ್ಟಿ ಸಲುವಾಗಿ ಖಾಸಗಿ ಬಸ್‌ಗಳಲ್ಲಿ ಬಾಗಿಲುಗಳ ಸರಿಪಡಿಸುವಿಕೆ, ಇಲ್ಲವಾದಲ್ಲಿ ಬಾಗಿಲು ಅಳವಡಿಸುವ ಬಗ್ಗೆ ಜೂನ್ 1ಕ್ಕೆ ಅಂತಿಮ ಗಡುವು ನೀಡಿದರೂ ಬಹಳಷ್ಟು ಬಸ್‌ಗಳಲ್ಲಿ ಇದನ್ನು ಪಾಲಿಸದ ಬಗ್ಗೆ ವರದಿಯಾಗಿದೆ. ಈಗಲೂ ಪ್ರಯಾಣಿಕರು ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಹೋಗುವ ಬಗ್ಗೆ ದೂರುಗಳು ದಾಖಲಾಗುತ್ತಿವೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಹಿತ ಪ್ರಮುಖ ರಸ್ತೆಗಳಲ್ಲಿ ನಿರ್ದಿಷ್ಟ ಸಮಯಗಳಲ್ಲಿ (ಶಾಲಾ- ಕಾಲೇಜು ಹಾಗೂ ಕಚೇರಿ ವೇಳೆ) ಕೆಲವು ಬಸ್‌ಗಳಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್ ಹತ್ತುವ(ಫುಟ್‌ಬೋರ್ಡ್) ಸ್ಥಳದಲ್ಲಿ ನಿಲ್ಲುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ತಕ್ಷಣ ಕ್ರಮ ಕೈಗೊಂಡ ಕುಂದಾಪುರ ಟ್ರಾಫಿಕ್ ಪೊಲೀಸರು ಕ್ಷಿಪ್ರವಾಗಿ ಬಸ್‌ಗಳನ್ನು ಪತ್ತೆ ಮಾಡಿ ದಂಡ ವಿಧಿಸಿದ್ದಾರೆ.
ನಿಯಮಾನುಸಾರ ನಿಗದಿತ ವಾಹನಗಳಲ್ಲಿರುವ ಆಸನ(ಸೀಟು)ಗಳಲ್ಲಿಯೇ ಪ್ರಯಾಣಿಕರನ್ನು ಕೂರಿಸಬೇಕು. ಆರ್.ಟಿ.ಒ. ನಿಯಮದಂತೆ ಹೆಚ್ಚುವರಿ ಪ್ರಯಾಣಿಕರನ್ನು ಹತ್ತಿಸಬಾರದು. ಬಸ್‌ಗಳಲ್ಲಿ ಮಡಿಸುವ ಮಾದರಿಯ ಬಾಗಿಲುಗಳನ್ನು ನವೀಕರಿಸಲು ಸೂಚಿಸಲಾಗಿತ್ತು.
ಬಸ್‌ನಲ್ಲಿ ಪ್ರಯಾಣಿಸುವರ ಸುರಕ್ಷೆ ನಿಟ್ಟಿನಲ್ಲಿ ಫುಟ್‌ಬೋರ್ಡ್‌ನಲ್ಲಿ(ಬಸ್ ಹತ್ತುವ ಜಾಗ) ನೇತಾಡುವುದು, ಅಲ್ಲಿಯೇ ನಿಲ್ಲುವ ಮೂಲಕ ತಮ್ಮ ಜೀವ, ಇತರರ ಜೀವಕ್ಕೆ ಹಾನಿಯಾಗುವ ಬಗ್ಗೆ ವರದಿಯಾದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಂಟಿಯಾಗಿ ಸಭೆ ಕರೆದು ಬಸ್‌ಗಳಿಗೆ ಬಾಗಿಲು ಅಳವಡಿಸಲು ಮತ್ತು ದುಸ್ಥಿತಿಯಲ್ಲಿರುವ ಬಾಗಿಲು ಸುವ್ಯವಸ್ಥೆಗೊಳಿಸಲು ಆದೇಶ ಮಾಡಿತ್ತು. ಜೂನ್ 1 ಕಳೆದು ಜುಲೈ ಮಾಸಾಂತ್ಯವಾದರೂ ಒಂದಷ್ಟು ಬಸ್‌ಗಳು ಬಾಗಿಲು ಅಳವಡಿಸದೆ ನಿಯಮಗಳನ್ನು ಗಾಳಿಗೆ ತೂರಿವೆ.
ಕೆಲವೇ ಗ್ಯಾರೇಜ್‌ಗಳಲ್ಲಿ ಈ ಸುಧಾರಿತ ಬಾಗಿಲು ಅಳವಡಿಕೆ ವ್ಯವಸ್ಥೆಯಿದ್ದು, ಜಿಲ್ಲಾಡಳಿತ ಖಾಸಗಿ ಬಸ್‌ಗಳ ಸಂಬಂಧಪಟ್ಟವರಿಗೆ ಈ ನಿರ್ದೇಶನ ಪಾಲಿಸಲು ಹೆಚ್ಚುವರಿ ಸಮಯ ನೀಡಿ ಜೂನ್ 1ರ ಗಡುವಿನೊಳಗೆ ಮಡಿಸುವ ಮಾದರಿಯ ಬಾಗಿಲನ್ನು ಅಳವಡಿಸಲು ಕಡ್ಡಾಯ ಆದೇಶ ಮಾಡಿತ್ತು. ನಿಯಮ ಮೀರಿದ ಯಾವುದೇ ಬಸ್‌ನ ಎಫ್‌ಸಿಯನ್ನು ರದ್ದುಗೊಳಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೆ ಬಾಗಿಲು ಅಳವಡಿಕೆಗೆ ಕಡ್ಡಾಯಗೊಳಿಸಿದ್ದ ನಿಗದಿತ ಗಡುವು ಮುಗಿದರೂ ಕೆಲವು ವಾಹನಗಳಲ್ಲಿ ನಿಯಮ ಪಾಲನೆ ಸರಿಯಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ, ಇಲಾಖೆಗಳ ಆದೇಶ ಪಾಲಿಸದೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಪತ್ತೆಗೆ ಮುಂದಿನ ದಿನಗಳಲ್ಲಿಯೂ ವಿಶೇಷ ಕಾರ್ಯಾಚರಣೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.

— ಅನೂಪ್ ನಾಯಕ್ ಕುಂದಾಪುರ ಸಂಚಾರ ಠಾಣೆ ಪಿಎಸ್‌ಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net