ಆರ್​ಟಿಒ ನಿರಾಕ್ಷೇಪಣಾ ಪತ್ರ ವಿಲೇವಾರಿ ಮಾಡದಿದ್ದರೆ ಹೋರಾಟ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಶೆಟ್ಟಿ ಬಣ) ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಅನ್ಸಾರ್​ ಅಹಮದ್ ಸುದ್ದಿಗೋಷ್ಠಿ
ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಶೆಟ್ಟಿ ಬಣ) ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಅನ್ಸಾರ್​ ಅಹಮದ್ ಸುದ್ದಿಗೋಷ್ಠಿ
Published on
ಉಡುಪಿ: ಆರ್​.ಟಿ.ಓ. ಕಚೇರಿಯಲ್ಲಿ ಸುಮಾರು 8 ತಿಂಗಳಿನಿಂದ ವಾಹನದ ನಿರಾಕ್ಷೇಪಣಾ ಪತ್ರ (ಸಿಸಿ) ನೀಡದೆ ಸತಾಯಿಸಲಾಗುತ್ತಿದ್ದು, ಇದರಿಂದ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. 15 ದಿನಗಳೊಳಗೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡದಿದ್ದರೆ ಆರ್​.ಟಿ.ಓ. ಕಚೇರಿಯ ಮುಂದೆ ಅರ್ನಿಧಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಶೆಟ್ಟಿ ಬಣ) ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಅನ್ಸಾರ್​ ಅಹಮದ್​ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ಕ್ಕಿಂತ ಮೊದಲಿನ ವಾಹನದ ಆರ್​.ಸಿ. ಪತ್ರದಲ್ಲಿ ವೀಲ್​ ಬೆಸ್​ ಹಾಗೂ ಎಚ್​.ಪಿ. ನಮೂದಿಸಿಲ್ಲ. ಹಾಗಾಗಿ ನಿರಾಕ್ಷೇಪಣಾ ಪತ್ರ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಕಾರಣ ನೀಡುತ್ತಿದ್ದಾರೆ. ಈ ಲೋಪಕ್ಕೆ ಸರ್ಕಾರ ಜವಾಬ್ದಾರಿ. ಆದರೆ ವಾಹನ ಮಾಲೀಕರನ್ನು ಬಲಿಪಶು ಮಾಡುವುದು ಸರಿಯಲ್ಲ. ಪಕ್ಕದ ಜಿಲ್ಲೆಗಳಲ್ಲಿ 580 ರೂ. ಶುಲ್ಕ ಕಟ್ಟಿಸಿಕೊಂಡು ಆರ್​.ಟಿ.ಓ. ನಿರೀಕ್ಷಕರು ಮೊಬೈಲ್​ ಆಪ್​ನಲ್ಲಿಯೇ ಬಿಟ್ಟುಹೋಗಿರುವ ಅಂಶಗಳನ್ನು ತುಂಬಿಸಿ ಕೇವಲ 5 ದಿನಗಳಲ್ಲಿ ಪತ್ರವನ್ನು ತರಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಆರ್​.ಟಿ.ಓ. ಅಧಿಕಾರಿಗಳಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್​ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್​ ಕುಲಾಲ್​, ಮಹಿಳಾ ಸಮಿತಿ ಅಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಉಪಾಧ್ಯಕ್ಷರಾದ ಸೈಯದ್​ ನಿಜಾಮ್​, ಸುಧೀರ್​ ಪೂಜಾರಿ, ಉಡುಪಿ ತಾಲೂಕು ಅಧ್ಯಕ್ಷ ಸತೀಶ್​ ಸನಿಲ್​, ಮಹಿಳಾ ಸಮಿತಿ ಉಪಾಧ್ಯಕ್ಷೆ ದೇವಕಿ ಬರ್ಕೂರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net