ನಿಟ್ಟೆ ಹಲಸು ಸಂಸ್ಕರಣಾ ಘಟಕ ಸ್ಥಗಿತ; ರೈತರಿಗೆ ವಂಚನೆ ಆರೋಪ

ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ, ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ. ಸಬ್ಸಿಡಿ ಹಣ ಪಡೆದು ಪ್ರಾರಂಭಿಸಿದ ನಿಟ್ಟೆಯ ಹಲಸು ಸಂಸ್ಕರಣಾ ಘಟಕ ಈಗ ಮುಚ್ಚುವ ಹಂತ ತಲುಪಿದ್ದು, ಇದರಿಂದ ರೈತರು ಹಾಗೂ ಗ್ರಾಮೀಣ ಮಹಿಳೆಯರಿಗೆ ವಂಚನೆ ಎಸಲಾಗಿದೆ
nitte fpo
ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ್​ ರೈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on: 

ಉಡುಪಿ: ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ, ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ. ಸಬ್ಸಿಡಿ ಹಣ ಪಡೆದು ಪ್ರಾರಂಭಿಸಿದ ನಿಟ್ಟೆಯ ಹಲಸು ಸಂಸ್ಕರಣಾ ಘಟಕ ಈಗ ಮುಚ್ಚುವ ಹಂತ ತಲುಪಿದ್ದು, ಇದರಿಂದ ರೈತರು ಹಾಗೂ ಗ್ರಾಮೀಣ ಮಹಿಳೆಯರಿಗೆ ವಂಚನೆ ಎಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ್​ ರೈ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 2024ರಲ್ಲಿ ಆರಂಭಗೊಂಡಿದ್ದ ಈ ಹಲಸು ಸಂಸ್ಕರಣಾ ಘಟಕವು ಪ್ರಸ್ತುತ ನಿಷ್ರಯೋಜಕ ಸ್ಥಿತಿಯಲ್ಲಿದ್ದು, ಸರ್ಕಾರ ಕೋಟ್ಯಂತರ ರೂ. ಸಬ್ಸಿಡಿ ದೋಚುವ ಉದ್ದೇಶದಿಂದ ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ ಎಂಬ ಅನುಮಾನ ಕಾಡುತ್ತಿದೆ ಎಂದರು.

ಕೋಟ್ಯಂತರ ರೂ. ಏನಾಯಿತು?

ಕೇಂದ್ರ ಸರಕಾರದ ಎಂ.ಎಸ್​.ಎಂ.ಇ ಯೋಜನೆಯಡಿ ಎಐಸಿ (ಅಟಲ್​ ನವೋದ್ಯಮ ಘೋಷಣಾ ಕೇಂದ್ರ) ಮೂಲಕ ಹಾಗೂ ಸ್ಫೂರ್ತಿ(- ಸಾಂಪ್ರದಾಯಿಕ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ನಿಧಿ ಯೋಜನೆ) ಅಡಿಯಲ್ಲಿ ಈ ಘಟಕಕ್ಕೆ ಅನುದಾನ ಪಡೆಯಲಾಗಿದೆ. ಕೇಂದ್ರ ಸರ್ಕಾರದಿಂದ 5 ಕೋಟಿ ರೂ. ಹಾಗೂ ನೀತಿ ಆಯೋಗದಿಂದ 70 ಲಕ್ಷ ರೂ. ಸೇರಿದಂತೆ ಒಟ್ಟು 5,70,92,000 ರೂ. ಅನುದಾನ ನೀಡಲಾಗಿದ್ದು, ಈ ಕೋಟ್ಯಂತರ ರೂಪಾಯಿ ಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದ್ದಾರೆ.

ಆರಂಭದಲ್ಲಿ ಸುಫಲ ಫಾರ್ಮರ್ಸ್​ ಪ್ರೊಡ್ಯೂಸರ್​ ಕಂಪನಿ ಹೆಸರಿನಲ್ಲಿ ತಲಾ 2000 ರೂ. ಪಡೆದು 750 ಕೃಷಿಕ ಸದಸ್ಯರನ್ನು ನೋಂದಾಯಿಸಲಾಗಿದ್ದು, ಎಲ್ಲಾ ರೈತರಿಂದ ಆರ್​ಟಿಸಿಯನ್ನು ಪಡೆದುಕೊಳ್ಳಲಾಗಿದೆ. 1,000 ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ದಿನಕ್ಕೆ 6000 ಟನ್​ ಹಲಸು ವಿಲೇವಾರಿ ಸಾಮರ್ಥ್ಯವಿದೆ ಎಂದೂ ಹೇಳಿಕೊಳ್ಳಲಾಗಿತ್ತು. ಆದರೆ, ಸದ್ಯ ಈ ಘಟಕದಲ್ಲಿ ಯಾವುದೇ ಉತ್ಪಾದನೆ ನಡೆಯುತ್ತಿಲ್ಲ. ಮಹಿಳೆಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಸರ್ಕಾರ ಸಬ್ಸಿಡಿ ಹಣ ದೋಚಿರುವುದು ಅತ್ಯಂತ ನೋವಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಎಚ್ಚರಿಕೆ

ಘಟಕದ ಹೆಸರಿನಲ್ಲಿ ಕ್ಯಾಶ್ಯೂಸ್​, ತೆಂಗು, ಬಾಳೆಹಣ್ಣು, ಹಲಸಿನ ಚಿಪ್ಸ್​, ಹಲ್ವಾ, ಜ್ಯೂಸ್​ ಹಾಗೂ ಪರಿಸರ ಸ್ನೇಹಿ ಊಟದ ಪ್ಲೇಟ್​ಗಳನ್ನು ತಯಾರಿಸಿ ವಿದೇಶಕ್ಕೂ ರಫ್ತು ಮಾಡಲಾಗುವುದು ಎಂದು ಆಸೆ ತೋರಿಸಲಾಗಿತ್ತು. ಆದರೆ ಈಗ ಎಲ್ಲವೂ ಹುಸಿಯಾಗಿದೆ. ಆಡಳಿತ ಮಂಡಳಿ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ನೇಮಿರಾಜ್​ ರೈ ಎಚ್ಚರಿಸಿದ್ದಾರೆ.

ಯೋಜನೆ ಸಂತ್ರಸ್ತರಾದ ಆನಂದ ಜೋಸೆಫ್‌, ಕಾಲ್ವಿನ್​ ಅಫೀಲಿಯಾ ಡಿಸೋಜಾ, ಶೋಭಾ ಕುಲಾಲ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net