ಸಂಚಾರಿ ಠಾಣೆಗೆ ಹೊಸ ಸೂರು

ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸ್ ಠಾಣೆ ಕಟ್ಟಡ.
ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸ್ ಠಾಣೆ ಕಟ್ಟಡ.
Published on
ರಾಘವೇಂದ್ರ ಪೈ ಕುಂದಾಪುರ
ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ಕೊನೆಗೂ ನೂತನ ಕಟ್ಟಡ, ಸ್ಥಳ ಮಂಜೂರಾಗಿದೆ. ಠಾಣೆಗಾಗಿ ಭಂಡಾರ್ಕಾರ್ಸ್ ಕಾಲೇಜು ಮುಂಭಾಗದಲ್ಲಿರುವ 28 ಸೆಂಟ್ಸ್ ಜಾಗ ಮಂಜೂರಾಗಿದ್ದು, ಪೊಲೀಸ್ ಇಲಾಖೆಯ ಸುಪರ್ದಿಗೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.

ಶಿಥಿಲ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ

ಕುಂದಾಪುರದ ಹಾಲಿ ಸಂಚಾರ ಪೊಲೀಸ್ ಠಾಣೆ ಕಟ್ಟಡ ಪ್ರವಾಸಿ ಮಂದಿರ ಬಳಿ ಹಳೆಯ ತಾಲೂಕು ಕಚೇರಿ ಕಟ್ಟಡಕ್ಕೆ ತಾಗಿಕೊಂಡು ಇದೆ. ಇದರ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಗೆದ್ದಲು ಹಿಡಿದು, ಗೋಡೆಯ ಗಾರೆ ಕಿತ್ತು ಬರುತ್ತಿದೆ. ಕಟ್ಟಡ ಯಾವಾಗ ಬೀಳುತ್ತದೋ ಎಂಬ ಆತಂಕದಲ್ಲೇ ಸಿಬ್ಬಂದಿ ಕೆಲಸು ಮಾಡುವಂತಾಗಿದೆ. ಸುಗಮ ಸಂಚಾರ, ಸಂಚಾರ ನಿಯಂತ್ರಣಕ್ಕಾಗಿ ದಿನವಿಡೀ ಮಳೆ, ಬಿಸಿಲೆನ್ನದೆ ಕೆಲಸ ಮಾಡುವ ಸಂಚಾರ ಪೊಲೀಸ್ ಠಾಣೆಗೆ ಸುಸಜ್ಜಿತ ಸೂರು ಇರಲಿಲ್ಲ.
ಹಿಂದೆ ಸರ್ಕಾರಿ ಬಸ್ ನಿಲ್ದಾಣ ಹತ್ತಿರವಿದ್ದ ಸಂಚಾರ ಠಾಣೆಯು 2010ರಲ್ಲಿ ಕುಂದಾಪುರ ಪೊಲೀಸ್ ಠಾಣೆ ಇದ್ದ ಸ್ಥಳಕ್ಕೆ ಸ್ಥಳಾಂತರಗೊಂಡಿತ್ತು. ಅಂದಿನ ಸಚಿವಡಾ.ವಿ.ಎಸ್.ಆಚಾರ್ಯ ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಉದ್ಘಾಟಿಸಿದ್ದರು. ಅಂದಿನಿಂದಲೂ ಸುಸಜ್ಜಿತ ಕಟ್ಟಡ ಬೇಡಿಕೆ ಇತ್ತು.

28 ಸೆಂಟ್ಸ್ ಜಾಗ ಮಂಜೂರು

ಮೊದಲು ಈಗ ಇರುವ ಠಾಣೆಯ ಮೇಲೆಯೇ ಸಂಚಾರ ಠಾಣೆಗೆ ಕಟ್ಟಡ ಕಟ್ಟಲು ನಿರ್ಣಯಿಸಿ 1 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಆದರೆ ಡೀಮ್ಡ್ ಫಾರೆಸ್ಟ್ ಕಾರಣದಿಂದ ಜಾಗ ಬದಲಾಯಿತು. ಪ್ರಸ್ತುತ ಭಂಡಾರ್ಕಾರ್ಸ್ ಕಾಲೇಜು ಎದುರು 28 ಸೆಂಟ್ಸ್ ಮಂಜೂರಾಗಿದೆ ಎಂದು ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ತಿಳಿಸಿದ್ದಾರೆ. 1.12 ಕೋಟಿ ರೂ. ಕಟ್ಟಡಕ್ಕೆ ಮಂಜೂರಾಗಿದ್ದು ಹೆಚ್ಚುವರಿ ಮೊತ್ತದ ಅಗತ್ಯವಿದೆ. ವಿವಿಧ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲು, ಠಾಣೆಯ ವಾಹನಗಳ ನಿಲುಗಡೆ, ಸುವ್ಯವಸ್ಥಿತ ಠಾಣೆ ನಿರ್ಮಾಣಕ್ಕೆ ಹೆಚ್ಚುವರಿ ಸ್ಥಳಾವಕಾಶ ಬೇಕಾಗಬಹುದು. ಪ್ರಸ್ತುತ ಇರುವ ಠಾಣೆಯ ಆವರಣದೊಳಗೆ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ರಸ್ತೆ ಬದಿ ನಿಲ್ಲಿಸುವ ಸ್ಥಿತಿ ಇದೆ. ನೂತನ ಕಟ್ಟಡ ನಿರ್ಮಾಣವಾದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿ ಸಂಚಾರಿ ಠಾಣೆ ಸುಗಮವಾಗಿ ಕಾರ್ಯನಿರ್ವಹಿಸಲಿದೆ.

ಶೋಚನೀಯ ಸ್ಥಿತಿಯಲ್ಲಿ ಶೌಚಗೃಹ

ಹಾಲಿ ಇರುವ ಕಚೇರಿಯ ಶೌಚಗೃಹ ತೀರಾ ನಾದುರಸ್ತಿಯಲ್ಲಿದ್ದು, ದುರ್ನಾತ ಬೀರುತ್ತದೆ. ತಾತ್ಕಾಲಿಕವಾಗಿಯೂ ದುರಸ್ತಿ ಮಾಡಿಲ್ಲ. ಶೌಚಗುಂಡಿಯ ಸುತ್ತಮುತ್ತ ಹೆಗ್ಗಣಗಳು ಸುರಂಗ ತೋಡಿದ್ದು, ಶೌಚಗೃಹಕ್ಕೆ ಹೋಗಲೂ ಆತಂಕದ ಸ್ಥಿತಿ ಉಂಟಾಗಿದೆ. ಮಳೆಯ ನೀರು ನೇರವಾಗಿ ಶೌಚಗುಂಡಿಗೆ ಹರಿಯುತ್ತದೆ.

ತೇಪೆ ಹಾಕಿದರೂ ನಿಲ್ಲುವುದಿಲ್ಲ

ಹಾಲಿ ಇರುವ ಕಟ್ಟಡ ಹೇಗಿದೆ ಎಂದರೆ ದೊಡ್ಡ ಗಾಳಿಗೂ ಉರುಳಿ ಬೀಳುವಂತಿದೆ. ಬ್ರಿಟಿಷರ ಕಾಲದ ಈ ಕಟ್ಟಡ ಅಂದಿನಿಂದ ಇಂದಿನ ತನಕ ಹಲವು ಮಹತ್ವದ ಆಡಳಿತ ನಿರ್ವಹಣೆಗೆ ಸಾಕ್ಷಿಯಾಗಿದೆ. ಕಟ್ಟಡದ ಗೋಡೆಗಳ ಗಾರೆ ಕಳಚಿ ಬೀಳುತ್ತಿದ್ದು, ವಯರ್‌ಗಳು ಜೋತಾಡುತ್ತಿವೆ. ಪಕ್ಕಾಸುಗಳಿಗೆ ಗೆದ್ದಲು ಹಿಡಿದು, ರೀಪುಗಳು ಮುರಿದು ಬೀಳುವ ಹಂತ ತಲುಪಿದೆ. ಸ್ಲಾೃಬ್‌ಗೆ ಅಳವಡಿಸಿದ ಸರಳುಗಳು ತುಕ್ಕು ಹಿಡಿದಿದೆ. ತಾತ್ಕಾಲಿಕವಾಗಿ ದುರಸ್ತಿ ಮಾಡಿದರೂ ಅದು ನಿಲ್ಲದಷ್ಟು ಕಟ್ಟಡ ಶಿಥಿಲವಾಗಿದೆ.

ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಹಕಾರದಿಂದ ಕುಂದಾಪುರ ಸಂಚಾರ ಠಾಣೆಗೆ 28 ಸೆಂಟ್ಸ್ ನಿವೇಶನ ಕಾಯ್ದಿರಿಸಲಾಗಿದ್ದು 1.12 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಈ ಮೊದಲು ನೀಡಿದ್ದ ಜಾಗವನ್ನು ಮರಳಿ ನೀಡಲಾಗಿದೆ. ಶೀಘ್ರವೇ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net