ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಪೀಠಾರೋಹಣಕ್ಕೆ ಸಿದ್ಧತೆ ಪೂರ್ಣ
ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಪ್ರಧಾನ ವೇದಿಕೆಯ ಅಂತಿಮ ಸಿದ್ಧತೆ ಪರಿಶೀಲಿಸಿದರು.
Published on:
Copied
Follow Us
* ಉಡುಪಿ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷ
* ಕಲ್ಯಾಣಪುರ ಕಾಲೇಜ್ ಮೈದಾನದಲ್ಲಿ ಸಮಾರಂಭ
ಉಡುಪಿ: ಉಡುಪಿ ಧರ್ಮ ಪ್ರಾಂತ್ಯದ ದ್ವಿತೀಯ ಅಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ನೇಮಕಗೊಂಡಿದ್ದು, ಅವರ ಪೀಠಾರೋಹಣ ಹಾಗೂ ಅಭಿಷೇಕ ಸಮಾರಂಭ ಏ.20ರಂದು ನಡೆಯಲಿದೆ. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಸಿದ್ಧತೆ ಪೂರ್ಣಗೊಂಡಿದೆ.
ಸಂತೆಕಟ್ಟೆ ಬಸ್ ನಿಲ್ಡಾಣದಿಂದ ಮಿಲಾಗ್ರಿಸ್ ಪ್ರಧಾನಾಲಯಕ್ಕೆ ತೆರಳುವ ಮಾರ್ಗ ಅಲಂಕರಿಸಲಾಗಿದ್ದು, ಸ್ವಾಗತ ಕಮಾನು ಅಳವಡಿಸಲಾಗಿದೆ. ಕಾರ್ಯಕ್ರಮದ ಪ್ರಧಾನ ವೇದಿಕೆಯಲ್ಲಿ ಧರ್ಮಾಧ್ಯಕ್ಷರ ಪೀಠಾರೋಹಣ ಸಮಾರಂಭ ಪವಿತ್ರ ಬಲಿಪೂಜೆಯೊಂದಿಗೆ ನೆರವೇರಲಿದೆ.
ಫ್ಯಾನ್, ನೀರಿನ ವ್ಯವಸ್ಥೆ
ವೇದಿಕೆಯಲ್ಲಿ 35 ಧರ್ಮಾಧ್ಯಕ್ಷರು ಆಸೀನರಾಗಲಿದ್ದು ಬಲಿಪೂಜೆಯ ಬಳಿಕ ಇದೇ ವೇದಿಕೆಯಲ್ಲಿಯೇ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಲಿದೆ. ಭಕ್ತಾದಿಗಳಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಬೃಹತ್ ಪೆಂಡಾಲ್ ಕಟ್ಟಲಾಗಿದೆ. ಬಿಸಿಲಿನ ಶಾಖ ವಿಪರೀತ ಇರುವುದರಿಂದ ಸಾಕಷ್ಟು ಫ್ಯಾನ್ ಹಾಗೂ ಕುಡಿಯವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಅಚ್ಚುಕಟ್ಟಿನ ವ್ಯವಸ್ಥೆ
ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಧರ್ಮಗುರುಗಳು, ಅಷ್ಟೇ ಸಂಖ್ಯೆಯಲ್ಲಿ ಧರ್ಮಭಗಿನಿಯರು, 6 ಸಾವಿರಕ್ಕೂ ಅಧಿಕ ಸಾರ್ವಜನಿಕರು, ವಿವಿಧ ರಾಜಕೀಯ, ಸಾಮಾಜಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ವಾಹನ ಪಾಕಿಂಗ್ಗೂ ಸಹ ವಿವಿಧೆಡೆ ಸ್ಥಳಾವಕಾಶ ಒದಗಿಸಲಾಗಿದೆ. ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಕಾರ್ಯಕ್ರಮದ ಸ್ಥಳದ ವರೆಗೆ ತಲುಪಿಸಲು ಪ್ರತ್ಯೇಕ ಬಸ್ ಮತ್ತು ಟೆಂಪೋ ವ್ಯವಸ್ಥೆ ಮಾಡಲಾಗಿದೆ. ಸ್ವಯಂ ಸೇವಕರು ಹಾಗೂ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ ಸಾಂಪ್ರದಾಯಿಕ ಸ್ವಾಗತ
ಪೀಠಾರೋಹಣದ ನಿಮಿತ್ತ ಆಗಮಿಸಲಿರುವ ಗೋವಾ ಮತ್ತು ದಮನ್ ಮಹಾ ಧರ್ಮಪ್ರಾಂತ್ಯದ ಮಹಾ ಧರ್ಮಾಧ್ಯಕ್ಷ ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ, ಬೆಂಗಳೂರು ಮಹಾ ಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ, ಭಾರತ ಮತ್ತು ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ (ಪೋಪ್ ಅವರ ವ್ಯಾಟಿಕನ್ ರಾಯಭಾರಿ) ಡಾ. ಲಿಯೋಪೋಲ್ಡೊ ಗಿರೆಲ್ಲಿ ಹಾಗೂ ನೂತನ ಧರ್ಮಾಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅವರನ್ನು ಮಿಲಾಗ್ರಿಸ್ ಪ್ರಧಾನಾಲಯದ ಪ್ರವೇಶ ದ್ವಾರದಲ್ಲಿ ಬೆಳಗ್ಗೆ 8:15ಕ್ಕೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು. ಬಳಿಕ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣದ ವಿಧಿ-ವಿಧಾನ ನಡೆಯಲಿದೆ.
"
ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭ ಅತ್ಯಂತ ಪವಿತ್ರ ಕಾರ್ಯಕ್ರಮವಾಗಿದೆ. ಈ ಸಮಾರಂಭವನ್ನು ನೇರಪ್ರಸಾರ ಮಾಡಲಾಗುತ್ತಿದ್ದು ವಿದೇಶದಲ್ಲಿರುವ ಕ್ರೈಸ್ತರಿಗೂ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿ ರಚಿಸಲಾಗಿದ್ದು, ಎಲ್ಲ ಸಿದ್ಧತೆಯೂ ಪೂರ್ಣಗೊಂಡಿದೆ.