ಬ್ರಹ್ಮಾವರಕ್ಕೆ ಹೊಸ ಜೆಎಂಎಫ್ ಸಿ ನ್ಯಾಯಾಲಯ ಮಂಜೂರು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಉಡುಪಿ: ಬ್ರಹ್ಮಾವರ ತಾಲೂಕಿನ ಜನತೆ ಬಹುದಿನಗಳ ಬೇಡಿಕೆಯಾಗಿದ್ದ ಪೂರ್ಣ ಪ್ರಮಾಣದ ಸಿವಿಲ್​ ಹಾಗೂ ಜೆಎಂಎಫ್​ಸಿ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಹೊಸದಾಗಿ ಸೃಷ್ಟಿಸಲಾದ ಬ್ರಹ್ಮಾವರ ನ್ಯಾಯಾಲಯಕ್ಕೆ ಒಟ್ಟು 7 ಪೂರಕ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಸಿವಿಲ್​ ನ್ಯಾಯಾಧೀಶರು, ಓರ್ವ ಶೀಘ್ರಲಿಪಿಗಾರರು (ಗ್ರೇಡ್​-2) ಓರ್ವ ಪ್ರಥಮ ದರ್ಜೆ ಸಹಾಯಕರು, ಹೊರಗುತ್ತಿಗೆ ಆಧಾರದಲ್ಲಿ ಓರ್ವ ಬೆರಳಚ್ಚುಗಾರರು, ಓರ್ವ ಅಟೆಂಡರ್​, ಇಬ್ಬರು ಕಛೇರಿ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಉಡುಪಿಯಲ್ಲೇ ಉಳಿದ ಜೆಎಂಎಫ್​ಸಿ ನ್ಯಾಯಾಲಯ
ಪ್ರಸ್ತುತ ಉಡುಪಿಯ 1ನೇ ಹೆಚ್ಚುವರಿ ಸಿವಿಲ್​ ಜಡ್ಜ್​ ಮತ್ತು ಜೆಎಂಎಫ್​ಸಿ ನ್ಯಾಯಾಲಯವು ವಾರದಲ್ಲಿ 4 ದಿನಗಳ ಕಾಲ ಬ್ರಹ್ಮಾವರಕ್ಕೆ ಸಂಚಾರಿ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಮೇ 12ರಂದು ಕರ್ನಾಟಕ ಹೈಕೋರ್ಟ್​ ಉಡುಪಿಯ 1ನೇ ಹೆಚ್ಚುವರಿ ಸಿವಿಲ್​ ಜಡ್ಜ್​ ನ್ಯಾಯಾಲಯವನ್ನು ಬ್ರಹ್ಮಾವರಕ್ಕೆ ಕಾಯಂ ಆಗಿ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದಕ್ಕೆ ಉಡುಪಿ ಬಾರ್​ ಅಸೋಸಿಯೇಶನ್​ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ಉಡುಪಿ ನ್ಯಾಯಾಲಯದ ಸ್ಥಳಾಂತರ ಪ್ರಕ್ರಿಯೆಗೆ ತಡೆ ಬಿದ್ದಿತ್ತು. ಸರ್ಕಾರದ ಹೊಸ ಆದೇಶದ ಹಿನ್ನೆಲೆಯಲ್ಲಿ ಸದ್ಯ ಬ್ರಹ್ಮಾವರಕ್ಕೆ ಸಂಚಾರಿ ನ್ಯಾಯಾಲಯವಾಗಿ ಸೇವೆ ನೀಡುತ್ತಿದ್ದ 1ನೇ ಹೆಚ್ಚುವರಿ ಸಿವಿಲ್​ ಜಡ್ಜ್​ ಮತ್ತು ಜೆಎಂಎಫ್​ಸಿ ನ್ಯಾಯಾಲಯ ಕಾಯಂ ಉಡುಪಿಯಲ್ಲೇ ಮುಂದುವರಿಯಲಿದೆ. ಬ್ರಹ್ಮಾವರಕ್ಕೆ ಪ್ರತ್ಯೇಕ ಹೊಸ ನ್ಯಾಯಾಲಯ ಸ್ಥಾಪನೆಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net