ಪಾಲಡ್ಕ ವ್ಯಾಪ್ತಿಯ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ

network problem
network problem
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾನಗರ, ಬಿ.ಟಿ.ರಸ್ತೆ, ಕುಕ್ಕುಂಜೆ, ಕಡಂದಲೆ ಹಾಗೂ ಜೋಡಿಕಟ್ಟೆ ಪ್ರದೇಶಗಳಲ್ಲಿ ಹಲವು ವಷರ್ಗಳಿಂದ ಸಮರ್ಪಕ ಮೊಬೈಲ್ ನೆಟ್‌ವರ್ಕ್ ಲಭ್ಯವಾಗದೆ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಪ್ರಮುಖ ದೂರಸಂಪರ್ಕ ಸಂಸ್ಥೆಗಳ ಸಿಗ್ನಲ್ ಈ ಭಾಗಗಳಲ್ಲಿ ಬಹುತೇಕ ಲಭ್ಯವಾಗದೇ, ದಿನನಿತ್ಯದ ಸಂಪರ್ಕ ವ್ಯವಸ್ಥೆ ಮತ್ತು ತುರ್ತು ಸೇವೆಗಳಿಗೂ ಅಡ್ಡಿಯಾಗುತ್ತಿದೆ.

ಯಾರಾದರೂ ಹಠಾತ್ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಆಸ್ಪತ್ರೆಗೆ ಸಂಪರ್ಕಿಸುವುದು, ರಿಕ್ಷಾ ಅಥವಾ ಆಂಬುಲೆನ್ಸ್‌ಗೆ ಕರೆ ಮಾಡುವುದೂ ಕಷ್ಟಕರವಾಗಿದ್ದು, ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯರು ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರಾದ ಜಗದೀಶ್ ಪೂಜಾರಿ ತಿಳಿಸಿದ್ದಾರೆ.
ಈ ಸಮಸ್ಯೆಯ ಪರಿಣಾಮ ಶಿಕ್ಷಣ ಕ್ಷೇತ್ರಕ್ಕೂ ತಟ್ಟಿದೆ. ವಿದ್ಯಾಗಿರಿ ಶಾಲೆ ಹಾಗೂ ಕಡಂದಲೆ ಸುಬ್ರಹ್ಮಣ್ಯ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಸರ್ಕಾರಿ ನಿಯಮದಂತೆ ಪ್ರತಿದಿನ ಮೊಬೈಲ್ ಆ್ಯಪ್ ಮೂಲಕ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಬೇಕಿದೆ. ಆದರೆ ನೆಟ್‌ವರ್ಕ್ ಕೊರತೆಯಿಂದ ಹಾಜರಾತಿ ದಾಖಲಿಸಲು ಸಾಧ್ಯವಾಗದೆ, ಕರ್ತವ್ಯಕ್ಕೆ ಹಾಜರಾಗಿದ್ದರೂ ತಾಂತ್ರಿಕವಾಗಿ ಗೈರಾಗುವ ಹಾಗೂ ಸಂಬಳದ ಮೇಲೆ ಪರಿಣಾಮ ಬೀಳುವ ಆತಂಕ ಎದುರಾಗಿದೆ.

ಎಸ್‌ಎಸ್‌ಆರ್ ಅಡಚಣೆ

ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಎಸ್‌ಆರ್) ಕಾರ್ಯಕ್ಕೂ ಈ ಸಮಸ್ಯೆ ಅಡ್ಡಿಯಾಗಿದೆ. ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರ ಮಾಹಿತಿಯನ್ನು ಸ್ಥಳದಲ್ಲೇ ದಾಖಲಿಸಿ ಅಪ್‌ಲೋಡ್ ಮಾಡಬೇಕಾದರೂ, ಜನತಾನಗರ, ಬಿ.ಟಿ.ರಸ್ತೆ, ಕುಕ್ಕುಂಜೆ, ಕಡಂದಲೆ ಹಾಗೂ ಜೋಡಿಕಟ್ಟೆ ಪ್ರದೇಶಗಳಲ್ಲಿ ನೆಟ್‌ವರ್ಕ್ ಇಲ್ಲದ ಕಾರಣ ಆನ್‌ಲೈನ್‌ನಲ್ಲಿ ಮಾಹಿತಿ ನವೀಕರಿಸಲು ಸಾಧ್ಯವಾಗುತ್ತಿಲ್ಲ.

ಡಿಜಿಟಲ್ ಯುಗದಲ್ಲಿಯೂ ಐದು ಪ್ರದೇಶಗಳ ನೂರಾರು ಕುಟುಂಬಗಳು ಸಮರ್ಪಕ ಮೊಬೈಲ್ ಸಂಪರ್ಕದಿಂದ ವಂಚಿತರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ದೂರಸಂಪರ್ಕ ಸಂಸ್ಥೆಗಳು ಶೀಘ್ರ ಕ್ರಮ ಕೈಗೊಂಡು ಹೊಸ ಮೊಬೈಲ್ ಟವರ್ ಅಳವಡಿಸುವ ಮೂಲಕ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

— ಜಗದೀಶ್ ಪೂಜಾರಿ, ಗ್ರಾಮಸ್ಥರು, ಪಾಲಡ್ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net